ಸಮ್ಮೇಳನದ ಉದ್ಘಾಟಕರಾದ ಇನ್ಫೋಸಿಸ್ ಕಂಪನಿಯ ಪ್ರವರ್ತಕ ಎನ್.ಆರ್. ನಾರಾಯಣ ಮೂರ್ತಿ ಅವರು ಬೆಂಗಳೂರಿನಲ್ಲಿ ನೀಡಿರುವ ಪತ್ರಿಕಾ ಸಂದರ್ಶನಲ್ಲಿ ಕನ್ನಡ, ಕನ್ನಡಿಗ, ಕನ್ನಡ ನಾಡಿನ ಬಗ್ಗೆ ತಮ್ಮ ಅಂತರಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಸಂರ್ಶನ ಆಯ್ದ ಭಾಗ ಹೀಗಿದೆ:
'ಭಾಷೆ ಎಂಬುದು ನನಗೆ ತುಂಬಾ ಮಹತ್ವದ್ದು. ಇಂದಿಗೂ ನಾನು ಮನೆಯಲ್ಲಿ ಕನ್ನಡದಲ್ಲಿಯೇ ಮಾತನಾಡುವುದು. ಅದು ನನಗೆ ಆಪ್ಯಾಯಮಾನವಾಗಿರುತ್ತದೆ. ನನ್ನ ಭಾವನೆಗಳನ್ನು ಕನ್ನಡದಲ್ಲಿ ಮಾತ್ರವೇ ವ್ಯಕ್ತಪಡಿಸಲು ನನಗೆ ಸಾಧ್ಯ. ನನ್ನ ತಾಯಿಗೆ ಕನ್ನಡದಲ್ಲಿಯೇ ಬರೆಯುವೆ ' ಎಂದು ಇನ್ಫೋಸಿಸ್ ನಾರಾಯಣ ಮೂರ್ತಿ ಮನದ ಮಾತನ್ನು ಹೇಳಿದ್ದಾರೆ.
ನೋಡಿ, ನನಗೆ ಕೋಪ ಬಂದಾಗ ಅತ್ಯಂತ ಸಹಜವಾಗಿ ಅಚ್ಚ ಕನ್ನಡದಲ್ಲಿ ಕೂಗಾಡುವೆ. ನನಗಾಗುವ ಸಂತೋಷ ಕನ್ನಡದಲ್ಲಿಯೇ ಉಕ್ಕಿಬರುತ್ತದೆ. ಸಾಹಿತ್ಯಿಕವಾಗಿ ಕನ್ನಡ ನನಗೆ ಆಪ್ತವಾಗುತ್ತದೆ. ಅದೇ ತಂತ್ರಜ್ಞಾನದ ಬಗ್ಗೆ ಓದಬೇಕು ಎಂದುಕೊಂಡಾಗ ಖಂಡಿತ ಇಂಗ್ಲಿಷ್ ಅನ್ನೇ ಬಳಸಿಕೊಳ್ಳುವೆ. ತಂತ್ರಜ್ಞಾನ ಅರಿಯಲು ಆಂಗ್ಲ ಭಾಷೆ ಅತ್ಯಂತ ಸಮಂಜಸವಾಗಿರುತ್ತದೆ ಎಂದು ಕನ್ನಡದ ವ್ಯಾಮೋಹ ಮತ್ತು ಇಂಗ್ಲಿಷ್ ನ ಅನಿವಾರ್ಯತೆಯನ್ನು ಅವರು ತೆರೆದಿಟ್ಟಿದ್ದಾರೆ.
'ಕನ್ನಡದಲ್ಲಿ ಪಠ್ಯಗಳನ್ನು ಅತ್ಯುತ್ತಮವಾಗಿ ರಚಿಸಿ. ಗಣಿತ, ವಿಜ್ಞಾನದಲ್ಲಿ ವಿಶ್ವ ದರ್ಜೆಯ ಶಾಲಾ ಪುಸ್ತಕಗಳನ್ನು ಹೊರತನ್ನಿ. ಕನ್ನಡ ಸಭೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಹುರಿದುಂಬಿಸಿ. ಕನ್ನಡವನ್ನೇ ಬಿಂಬಿಸಿ. ಆದರೆ ಇತರೆ ಭಾಷೆಗಳಿಗೆ ಕುರುಡಾಗಿ ಕನ್ನಡಕ್ಕೆ ಜೋತು ಬೀಳುವ ಮನೋಭಿಲಾಷೆ ಬೇಡ' ಎಂಬ ಎಚ್ಚರಿಕೆಯನ್ನೂ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟಕರಾಗಿ ಎನ್ನಾರೆನ್ ನೀಡಿದ್ದಾರೆ.
'ಕನ್ನಡ ಬಲಿಷ್ಠವಾಗಿರಬೇಕು ಎಂದರೆ ಕನ್ನಡಿಗರು ಸದೃಢರಾಗಬೇಕು. ಕನ್ನಡಿಗರು ಸದೃಢಬೇಕೆಂದರೆ ಕರ್ನಾಟಕ ಬಲಶಾಲಿಯಾಗಬೇಕು. ಕೊನೆಗೆ ಕರ್ನಾಟಕ ಬಲಶಾಲಿಯಾಗಿರಬೇಕು ಎಂದರೆ ಕನ್ನಡಿಗರಿಗೆ ಹೆಚ್ಚು ಆದಾಯ ತರುವಂತಹ ಉದ್ಯೋಗಗಳನ್ನು ಸೃಷ್ಟಿಸಬೇಕು. ಇನ್ಫೋಸಿಸ್ ಅಂತಹ ಕಂಪನಿಗಳು ಇದನ್ನೇ ಮಾಡುತ್ತಿರುವುದು. ಇದರ ಬಗ್ಗೆ ನಮಗೆ ತುಂಬಾ ತುಂಬಾ ಹೆಮ್ಮೆಯಿದೆ' ಎಂದು ಕನ್ನಡ, ಕರ್ನಾಟಕ, ಕನ್ನಡಿಗರ ಸ್ಥಿತಿಗತಿಗಳ ಬಗ್ಗೆ ಅವರು ತಮ್ಮ ತರ್ಕಬದ್ಧ ನಿಲುವನ್ನು ಸ್ಪಷ್ಟಪಡಿಸಿದರು.
ವಿಶ್ವದಾದ್ಯಂತ ಅನೇಕ ಸಮ್ಮೇಳನಗಳಲ್ಲಿ ಆಮಂತ್ರಿತನಾಗಿ ಭಾಗವಹಿಸುವ ಪರಿಪಾಠ ಇಟ್ಟುಕೊಂಡಿರುವುದಾಗಿ ಹೇಳಿದ ನಾರಾಯಣ ಮೂರ್ತಿ ಅವರು 'ಇಂತಹ ಸಭೆಗಳಲ್ಲಿ ಯುವಜನತೆಯನ್ನು ಹುರಿದುಂಬಿಸಿ ಮಾತನಾಡುವೆ. ಬೆಳಗಾವಿಯಲ್ಲಿ ನಡೆಯುವ ಕನ್ನಡ ಸಮ್ಮೇಳನಕ್ಕೆ ನಾನಾ ಆಯಾಮಗಳು ಇವೆಯೆಂಬುದನ್ನು ಬಲ್ಲೆ. ಇಲ್ಲಿ ಅಸಂಖ್ಯಾತ ಯುವಕರು ಭಾಗವಹಿಸಲಿದ್ದಾರೆ. ಅದು ಇಷ್ಟವಾಗಿ ಸಮ್ಮೇಳನದ ಉದ್ಘಾಟನೆಗೆ ಒಪ್ಪಿಕೊಂಡೆ' ಎಂದು ತಿಳಿಸಿದ್ದಾರೆ. ಅಂದಹಾಗೆ, ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಗೆ ಮಂಗಳವಾರ ನೀಡಿರುವ ಸಂದರ್ಶನದಲ್ಲಿ ನಾರಾಯಣ ಮೂರ್ತಿ ಈ ಮಾತುಗಳ್ನು ಹೇಳಿದ್ದಾರೆ:ಕೃಪೆ:thatskannada
ದುರ್ಗದ ಧೂಳಿನಲ್ಲಿ ಕಂಡ ಪ್ರಶ್ನೆಗಳು, ಚಿತ್ರಗಳು
17 ವರ್ಷಗಳ ಹಿಂದೆ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ