ಪುಟಗಳು

ಭಾನುವಾರ, ಮಾರ್ಚ್ 6, 2011

ವಿಜಯ್ ಮಲ್ಯ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟನೆ ಮಾಡಬೇಕು!


ನಾರಾಯಣಮೂರ್ತಿಗಳಿಗಿಂತ  ವಿಜಯ್ ಮಲ್ಯ ಉತ್ತಮ ಕನ್ನಡಿಗರು.
ಪ್ರತಾಪ ಸಿಂಹರು ನಾರಾಯಣ ಮೂರ್ತಿಯವರನ್ನು ಶತಾಯಗತಾಯ ಸಮರ್ಥಿಸಿ ಕೊಂಡಿರುವ ರೀತಿ ಎಷ್ಟು ಹಾಸ್ಯಾಸ್ಪದವಾಗಿದೆಯೆಂದರೆ ಇದೆ ರೀತಿ ವಿಜಯ್ ಮಲ್ಯರ ಬಗ್ಗೆಯೂ ಸಮರ್ಥಿಸಿಕೊಳ್ಳಬಹುದು.ವಿಜಯ್ ಮಲ್ಯರ ಕರ್ಮಭೂಮಿ ಬೆಂಗಳೂರು. ಅವರ ಹೆಡ್ದಾಪೀಸು ಬೆಂಗಳೂರ್ನಲ್ಲಿದೆ. ಐ ಪಿ ಎಲ್ ನಲ್ಲಿ   ಬೇರೆ ಎಲ್ಲ ಪ್ರಾಂಚೈಸಿ ಗಳನ್ನೂ ಕಡಿಮೆ ಬೆಲೆಯಲ್ಲಿ ಕೊಳ್ಳುವ ಅವಕಾಶಗಳಿದ್ದರೂ ಹೆಚ್ಚಿನ ಬೆಲೆ ತೆತ್ತು ಬೆಂಗಳೂರನ್ನೇ ಕೊಂಡರು.
ರಾಜಕೀಯವಾಗಿ ಅವರು ಬೆಳೆಯಲು ಪ್ರಯತ್ನಿಸಿದ್ದು ಕರ್ನಾಟಕದಲ್ಲಿ. ಅವರ ಮಗನೂ ಸಹ ಅಪ್ಪಟ ಕನ್ನಡಿಗ ಏಕೆಂದರೆ ಕನ್ನಡತಿಯಾದ ದೀಪಿಕಾ ಪಡುಕೋಣೆಯೊಡನೆ  ಮಾತ್ರ ಡೇಟಿಂಗ್ ಮಾಡುತ್ತಾನೆ.ಶಿಲ್ಪಾ ಶೆಟ್ಟಿಯನ್ನು ತಮ್ಮ ರಾಜಕೀಯ ಪಕ್ಷದ ರಾಯಭಾರಿಯಾಗಿ ಕನ್ನಡಕ್ಕೆ ಕರೆತಂದರು. ಅವರು ಮನಸು ಮಾಡಿದ್ದರೆ ಬೆರಯವರನ್ನು ಕರೆತರಬಹುದಿತ್ತು. ಆದರೆ ಕನ್ನಡತಿಯನ್ನೇ ತಂದರು.
ಅವರ ಯುನೈಟೆಡ್ ಬೆವರೆಜಸ್ ನಲ್ಲಿ ಇನ್ಪೋಸಿಸ್ ಗಿಂತ ಹೆಚ್ಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಕೆಲಸ ಮಾಡುತ್ತಾರೆ. ಅವರಿಗೆಲ್ಲ ಉಚಿತವಾಗಿ ಮದ್ಯಾರಾಧನೆಯೂ ಆಗುತ್ತದೆ. ಅವರೂ ಸಹ ಅನೇಕ ಸಾಮಾಜಿಕ ಕೆಲಸಗಳನ್ನು ಕನ್ನಡದ ನೆಲದಲ್ಲಿ ಮಾಡಿದ್ದಾರೆ. ಅವರೂ ಸಹ ಕೋಟ್ಯಂತರ ರುಪಾಯಿಗಳನ್ನು ಮುಂಡಾಯಿಸಿದ್ದಾರೆ ಸರಕಾರಕ್ಕೆ. ಅವರೂ ಸಹ ಕೋರ್ಟ್ ತೀರ್ಪಿಗೆ ತಲೆಬಾಗುತ್ತಾರೆ.
ಹೀಗಾಗಿ ವಿಜಯ್ ಮಲ್ಯ ಸಹ ಕನ್ನಡ ಸಮ್ಮೇಳನವನ್ನು ಉದ್ಘಾಟನೆ ಮಾಡಬೇಕು!
ನೇರವಾಗಿ ನೋಡಿದರೆ ಪ್ರತಾಪಸಿಂಹ, ನಾರಾಯಣಮೂರ್ತಿ ಇಬ್ಬರನ್ನು ಸೇರಿಸಿದರೂ ಬರಗೂರು ಮಾಡಿದ ಕನ್ನಡದ ಕೆಲಸಕ್ಕೆ ಸಮನಾಗುವುದಿಲ್ಲ.ಬರಗೂರು ಅನೇಕ ಬುಡಕಟ್ಟು ಮತ್ತು ಅಲೆಮಾರಿ ಸಂಸ್ಕೃತಿಗಳ ಬಗ್ಗೆ ಅಧ್ಯಯನ ಮಾಡಿ ದಾಖಲಿಸಿದ್ದಾರೆ.ವಯಕ್ತಿಕವಾಗಿ ಅವರನ್ನು ನಾನು ಭೇಟಿಯಾಗಿದ್ದೇನೆ. ತನಗಿಂತ ಚಿಕ್ಕವರೇ ಆಗಲಿ ದೊಡ್ದವರೇ ಆಗಲಿ ಎರಡೂ ಕೈಗಳನ್ನು ಮುಗಿದು ನಮಸ್ಕರಿಸುತ್ತಾರೆ. ಅದೊಂದು ಸಂಸ್ಕಾರ ಅವರಲ್ಲಿದೆ. ತಾತ್ವಿಕವಾಗಿ ಅವರ ಎಷ್ಟೋ ವಿಚಾರಗಳು ಒಪ್ಪಿಗೆ ಎನಿಸದಿದ್ದರೂ ಈ ವಿಷಯದಲ್ಲ್ಲಿ ಬರಗೂರು ರಾಮಚಂದ್ರಪ್ಪನವರ ನಿಲುವು ಸರಿ ಎನಿಸುತ್ತದೆ.
ನಾರಾಯಣಮುರ್ತಿಯವರನ್ನು ಸಮರ್ಥಿಸಿರುವ ಲೇಖನವು ಬುದ್ದಿಜೀವಿಗಳ ಕಡೆಗೆ ಪ್ರತಾಪಸಿಂಹರ ತಿರಸ್ಕಾರದ ವಿಸ್ತೃತ ಭಾಗವಾಗಿಯೇ ಕಾಣುತ್ತದೆ. ನಾರಾಯಣಮುರ್ತಿಯವರು ಕಂಪನಿಯನ್ನು ಸ್ಥಾಪಿಸಿದ್ದು ಪುಣೆಯಲ್ಲಿ. ಬೆಂಗಳೂರನ್ನು ಮೆಚ್ಚಿ ಕಂಪನಿಗಳು ಬರತೊಡಗಿದಾಗ ನಾರಾಯಣಮುರ್ತಿಗಳೂ ಬಂದರು.ನಮಗೆ ಅದು ಕೊಡಿ ಇದು ಕೊಡಿ ಇಲ್ಲವಾದೆರ್ ಚೀನಾಕ್ಕೆ ಹೋಗುತ್ತೇವೆ ಎಂದು ಬ್ಲಾಕ್ಫ್ ಮೇಲ್ ಮಾಡಿದ ಗುಂಪಿನ ಮುಂದಾಳುಗಳಲ್ಲಿ ಮುರ್ತಿಗಳೂ ಒಬ್ಬರು. ಚೀನಾದಲ್ಲಿ ಒಳ್ಳೆಯ ತೆರಿಗೆ ವಿನಾಯಿತಿ ಹಾಗೂ ಮಾನವ  ಸಂಪನ್ಮೂಲ ಸಿಕ್ಕರೆ ಬೆಂಗಳೂರಿನ ಆಪೀಸನ್ನು ಮುಚ್ಚಿಕೊಂಡು ಅಲ್ಲಿಗೆ ಹೋಗಲಾರರೆ "ಕನ್ನಡ ಕುವರ" ನಾರಾಯಣ ಮೂರ್ತಿ ?
ಆಯಿತು. ಕನ್ನಡಿಗರಿಗೆ ಉತ್ತಮ ಸೌಲಭ್ಯ ಕೊಡುವುದು ಮೂರ್ತಿಗಳ ಉದ್ದೇಶವಾದರೆ ರಾಯಚೂರು ಗುಲಬರ್ಗಾ ಜಿಲ್ಲೆಗಳಲ್ಲಿ ಕಂಪನಿ ಹಾಕಿ ಅಲ್ಲಿನ ಸ್ಥಳೀಯರಿಗೆ ಏಕೆ ಕೆಲಸ ಕೊಡಬಾರದು? (ನಮ್ಮ ಮಲ್ಯ ರವರು ಅಲ್ಲಿನವರಿಗೆ ಕೆಲಸ ಕೊಟ್ಟಿದ್ದಾರೆ.)ನಾರಾಯಣ ಮೂರ್ತಿಯವರು ಕನ್ನಡದಲ್ಲಿ ಮಾತನಾಡಿದ್ದು ನಾನು ಕೇಳಿಲ್ಲ. ನಾನು ಕನ್ನಡ ಮಾಧ್ಯಮ, ನನ್ನ ಬಹುತೆಕ ಸ್ನೇಹಿತರು ಕನ್ನಡ ಮಾಧ್ಯಮದವರು. ಜಪಾನ್ ಅಮೇರಿಕೆಯಂತಹ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಐ ಟಿ ಕೆಲಸ ಸಿಗಲು ಇಂಗ್ಲೀಷಿನಲ್ಲಿಯೇ ಓದಬೇಕೆಂದು ಪ್ರತಾಪಸಿಂಹರು ಅಪ್ಪಣೆ ಕೊಡಿಸಿದ್ದಾರೆ. ಇದು ಸಿ ಆರ್ ಸಿಂಹ ತಮ್ಮ ಬಾಡೂಟ ಮತ್ತು ಕುಡಿತದ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಷ್ಟೇ ಅನೈತಿಕ ಮತ್ತು ಅಪಾಯಕಾರಿ! ಸಾಪ್ಟ್ ವೇರ್ ಬಗ್ಗೆ ತಮಗೇನು ಗೊತ್ತಿಲ್ಲ ಹಾಗೂ ಅದರ ಸಂಸ್ಕೃತಿಯ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಹಿಂದೆ "ಕುರುಡು ಕಾಂಚಾಣ" ಕೇಸಿನಲ್ಲಿ ಪ್ರಾಯೋಗಿಕವಾಗಿ ಪ್ರತಾಪಸಿಂಹ ಸಾಬೀತು ಪಡಿಸಿಕೊಂಡಿದಾರೆ. ಕಂಪನಿಗಳಲ್ಲಿ ಕನ್ನಡ ಬೆಳೆಯುತ್ತಿರುವುದಕ್ಕೆ ಅಲ್ಲಿನ ಕನ್ನಡ ಹುಡುಗರ ಕಾಳಜಿಯೇ ಕಾರಣ ಹೊರತು ಮೂರ್ತಿಗಳ ಕೈವಾಡವಲ್ಲ.
ಕಾಕಿನಾಡ ಕಾರೈಕಲ್ ನಂತಹ ತೀರ ಕೆಳ ವರ್ಗದ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸಂದರ್ಶನದಲ್ಲಿ ಕರೆತಂದು ಬೆಂಗಳೂರಲ್ಲಿ ತುಂಬಿಸುವ ಮೂರ್ತಿಯವರು ಕನ್ನಡಪ್ರೆಮಿಯೇ? ಇವರ ಕಂಪನಿಯಲ್ಲಿ ಕನ್ನಡಿಗರಿಗೆ ಇಷ್ಟು "ಕೋಟಾ" ಎಂದು ಪಿಕ್ಸ್ ಮಾಡಿದ್ದಾರೆಯೇ? ಅಂತ ದೊಡ್ಡ ಕಂಪನಿಯು ಕನ್ನಡಕ್ಕಾಗಿ ಒಂದು ಪಾಂಟ್, ತಂತ್ರಾಂಶ ಬೆಳೆಸಿದೆಯೇ?  ಸಾವಿರಾರು ಕೋಟಿ ಆದಾಯ ವಿರುವ ಇನ್ಪೋಸಿಸ್ ಎಂಟು ಕೋಟಿ ದಾನ ಮಾಡಿದ್ದು ಕನ್ನಡ ಸೇವೆಯೇ?  ಇದಕ್ಕಿಂತ ಹೆಚ್ಚಿನದನ್ನು ಅನೇಕ ಕಂಪನಿಗಳು ಮಾಡಿವೆ. ಮೂರ್ತಿಗಳು ಮಾಡಿದ ಪ್ರತಿಯೊಂದು ಪತ್ರಿಕೆಯಲ್ಲಿ ಬರುತ್ತದೆ ಅಷ್ಟೇ! ಹಾಳಾಗಿ ಹೋಗಲಿ ಅಷ್ಟೊಂದು ಕೋಟಿ ಹಣ ಇರುವ ಸಂಸ್ಥೆ ಯಾವ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಂಡಿದೆ. ಅದಕ್ಕೊಂದು ರಿಸರ್ಚ್ ವಿಂಗ್ ಇದೆಯೇ? ತೀರ ಇತ್ತೀಚಿಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆನ್ನು ತಿರುಗಿಸಿದಾಗಲೇ ಗೊತ್ತಾಗಲಿಲ್ಲವೇ ಕನ್ನಡ ಪ್ರೇಮದ ಬಣ್ಣ?
ನಾರಾಯಣ ಮೂರ್ತಿ ಅಷ್ಟು ಎತ್ತರಕ್ಕೆ ಬೆಳೆದಿದ್ದಕ್ಕಾಗಿ ಕನ್ನಡಿಗರಾಗಿ ನಾವು ಹೆಮ್ಮೆ ಪಡೋಣ. ಸನ್ಮಾನವನ್ನೂ ಮಾಡೋಣ. ಆದರೆ ಅವರಿಂದ ಕನ್ನಡ ಉದ್ದಾರ ಆಗಿದೆ ಎಂಬ ಹೋಗಲು ಭಟ್ಟಂಗಿತನವನ್ನು  ಒಪ್ಪಲಾಗದು. ಮೂರ್ತಿಗಳಿಗಿಂತ ಹೆಚ್ಚು ಬೆಳೆದವರು ವಿಜಯ್ ಮಲ್ಯ. ಮೂರ್ತಿಯಾದರೋ ಬರೀ ಸಾಪ್ಟೆರು. ಮಲ್ಯರದು? ಹೆಂಡ, ಕ್ಯಾಲೆಂಡರು, ಕುದುರೆ, ವಿಮಾನ, ರಿಯಲ್ ಎಸ್ಟೇಟು, ಕ್ರಿಕೆಟ್ಟು ಇತ್ಯಾದಿ.
ಪ್ರಚಾರಕ್ಕಾಗಿ ಹಪಹಪಿಸುತ್ತಾರೆ ಅಥವಾ ವಿಚಾರಗಳಲ್ಲಿ ವೈರುಧ್ಯವಿದೆ ಎಂದ ಮಾತ್ರಕ್ಕೆ ಸಾರಾಸಗಟಾಗಿ ಅವರು ಹೇಳುವ ಎಲ್ಲವನ್ನೂ ತಿರಸ್ಕರಿಸುವುದು ಎಷ್ಟು ಸರಿ?
(ಚಿತ್ರ ಕೃಪೆ :-ಶ್ರೀಹರ್ಷ ಸಾಲಿಮಠ www.ibtimes.com)

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

ವಿಶ್ವ ಕನ್ನಡ ಸಮ್ಮೇಳನ ಕಾರ್ಯಕ್ರಮದ ನೇರ ಪ್ರಸಾರ........