ಬೆಂಗಳೂರು : ಕನ್ನಡ ಸಂಬಂಧಿ ಮೇಳಗಳಲ್ಲಿ ಕೇವಲ ಸಾಹಿತಿಗಳೇ ಇರಬೇಕು ಎಂದು ಏಕೆ ಪಟ್ಟು ಹಿಡಿಯುವಿರಿ? ಕನ್ನಡದ ಅಭಿವೃದ್ಧಿಗೆ ಶ್ರಮಿಸುತ್ತಿರುವವರು ಅವರಷ್ಟೇ ಏನು? ನನ್ನ ಪ್ರಕಾರ ಬೆಳಗಾವಿಯಲ್ಲಿ ಜರುಗಲಿರುವ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ನಾರಾಯಣ ಮೂರ್ತಿ ಅತ್ಯಂತ ಅರ್ಹ ವ್ಯಕ್ತಿ ಎಂದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹೊತ್ತಿದ್ದ ಸಾರಸ್ವತ ಲೋಕದ ಹಿರಿಯ ಜೀವಿ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಎನ್ನಾರೆನ್ ಬಗ್ಗೆ ಸರ್ಟಿಫಿಕೆಟ್ ನೀಡಿದ್ದಾರೆ.
ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟಕರು ಎನ್. ಆರ್. ನಾರಾಯಣ ಮೂರ್ತಿ ಎಂದು ಸರಕಾರ ಉದ್ಘೋಷಿಸಿದ ದಿನದಿಂದ ಕೇಳಿಬರುತ್ತಿರುವ ಭಿನ್ನಾಭಿಪ್ರಾಯಗಳ ಬಗ್ಗೆ ನಿಘಂಟು ತಜ್ಞ, 98 ವರ್ಷದ ಜಿವಿ ಅವರು ಷರಾ ಬರೆದಿರುವುದು ಹೀಗೆ. ಕನ್ನಡ ಪದದ ಅರ್ಥ ವಿಶಾಲವಾಗಿದೆ. ಸಂಕುಚಿತಗೊಂಡು ಸಾಹಿತ್ಯಕ್ಕಷ್ಟೇ ಅದು ಸೀಮಿತವಾಗದು. ಸಾಹಿತ್ಯ, ಕಲೆ, ಸಂಗೀತ ಮತ್ತು ಸಂಸ್ಕೃತಿಯ ಜತೆಗೆ ಅದು ದೇಶ ವಿಸ್ತಾರವನ್ನೂ ಪಡೆದಿದೆ. ಕನ್ನಡ ಎಂಬುದು ಒಂದು ಅಪ್ಪಟ ಸಂಸ್ಕೃತಿ ಎಂದು ಕನ್ನಡವೆಂಬ ಪದದ ಬಗ್ಗೆ ಸಂಕ್ಷಿಪ್ತ ನಿಘಂಟು ಬಿಡಿಸುವ ಪ್ರಯತ್ನವನ್ನೂ ಜಿವಿ ಮಾಡಿದ್ದಾರೆ.
ಸರಕಾರದ ನಿರ್ಧಾರವನ್ನು ಅನುಮೋದಿಸುತ್ತಾ, ಅನೇಕ ಕನ್ನಡಿಗರು ನಾನಾ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಇಲ್ಲಿನ ಭಾಷೆ, ನೆಲ, ಜನರ ಪ್ರಗತಿಗೆ ಕಾರಣಕರ್ತರಾಗಿದ್ದಾರೆ. ನಾರಾಯಣ ಮೂರ್ತಿಯವರು ದೇಶದ ಆರ್ಥಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಖಂಡಿತವಾಗಿಯೂ ಸಮ್ಮೇಳನದ ಉದ್ಘಾಟನೆಗೆ ಅವರು ಅತ್ಯಂತ ಅರ್ಹರು ಎಂದು ಜೀವಿ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. ಅವರ ಪತ್ನಿ ಸುಧಾಮೂರ್ತಿ ಉತ್ತಮ ಲೇಖಕಿ. ಅವರು ಕನ್ನಡ ಲೋಕಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ನಾರಾಯಣಮೂರ್ತಿ ಅವರಲ್ಲದಿದ್ದರೆ ಮತ್ಯಾರು? ಎಂದೂ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ