ಪುಟಗಳು

ಭಾನುವಾರ, ಮಾರ್ಚ್ 6, 2011

ಡಾಲರ್ ಲೆಕ್ಕಕ್ಕೆ : ಕನ್ನಡ ಪಕ್ಕಕ್ಕೆ

ಬೆಳಗಾವಿಯಲ್ಲಿ ನಡೆಯೋ ವಿಶ್ವ ಸಮ್ಮೇಳನದ ಉದ್ಘಾಟನೆಗಾಗಿ ಇನ್ಫೋಸಿಸ್ ನಾರಾಯಣ ಮೂರ್ತಿಯವರನ್ನ ಸರ್ಕಾರ ಆಹ್ವಾನಿಸಿದ್ದು, ಮತ್ತದಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಆಕ್ಷೇಪಿಸಿ ಪತ್ರ ಬರೆದಿದ್ದು ಈದೀಗ ಚರ್ಚೆಗೆ ಗ್ರಾಸವಾಗಿದೆ.ಯಾರೇ ಕೂಗಾಡಲಿ ಊರೇ ಹೊರಾಡಲಿ 'ಇನ್ಫಿ ನಾಣಿ'ಯವ್ರೆ ಉದ್ಘಾಟನೆ ಮಾಡ್ತಾರೆ ಅಂತ ಯಡ್ಯೂರಪ್ಪನವ್ರು ಹೇಳಿಯಾಗಿದೆ.ಅದು ಬದಿಗಿರಲಿ.ಬರಗೂರರ ಪತ್ರಕ್ಕೆ ಪ್ರತಿವಾದವಾಗಿ ಕನ್ನಡ ಪ್ರಭದಲ್ಲಿ ಪ್ರತಾಪ್ ಸಿಂಹ "ನಾರಾಯಣ ಮೂರ್ತಿ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟದ್ದು ಕನ್ನಡದ ಕೆಲಸವಲ್ಲವೇ?ಕೇವಲ ಸಾಹಿತ್ಯ ಕೃಷಿಯೊಂದೇ ಕನ್ನಡದ ಕೈಂಕರ್ಯವೇ? " ಅಂತ ಕೇಳಿದ್ದಾರೆ.ಮುಕ್ತ ಚರ್ಚೆಗೆ ಆಹ್ವಾನವನ್ನು ನೀಡಿದ್ದಾರೆ.ಅದನ್ನೆಲ್ಲ ಓದುವಾಗ ಬಹಳಷ್ಟು ಜನ ಬರಗೂರರಿಗೆನು ಹಕ್ಕಿದೆ?ಸಾಹಿತಿಗಳೇ ಏಕೆ ಬೇಕು ಅಂದಿದ್ದಾರೆ?

ನಿಜ.ಕೇವಲ ಸಾಹಿತ್ಯ ಕೃಷಿಯೊಂದೇ ಕನ್ನಡದ ಕೈಂಕರ್ಯವಲ್ಲ ಅನ್ನುವ ಪ್ರತಾಪ್ ಮಾತು ಒಪ್ಪಲೆಬೇಕಾದದ್ದು.ಆದರೆ ಬೆಂಗಳೂರಿನ ಭಾಗ್ಯೋದಯಕ್ಕೂ ಇನ್ಫೋಸಿಸ್ ನಾರಾಯಣ ಮೂರ್ತಿಯವರೆ ಕಾರಣ ಅನ್ನುವ ರೀತಿಯ ಮಾತುಗಳು ಸಹ್ಯವೇ?ಸುಮ್ಮನೆ ಕನ್ನಡಿಗರಿಗೆ ಕೆಲಸ ಕೊಟ್ರೂ,ಜೀವನ ಕೊಟ್ರೂ ಅಂತ ಅಬ್ಬರಿಸಿದರಾಯಿತೆ.ಕನ್ನಡಿಗರಿಗೆ ಕೆಲಸ ಕೊಟ್ರೂ ಕೊಟ್ರೂ ಅನ್ನೋವ್ರು ಒಮ್ಮೆ ಹೋಗಿ ಮೂರ್ತಿಯವರ ಕಂಪೆನಿಯಲ್ಲಿ ಎಷ್ಟು ಪ್ರತಿಶತ ಜನ ಕನ್ನಡಿಗರಿದ್ದಾರೆ?ಅಲ್ಲಿರುವ ಕನ್ನಡಿಗರಾದರು ಯಾವ ಡೆಸಿಗ್ನೇಷನ್ ಹೊಂದಿದ್ದಾರೆ? ಅಸಲಿಗೆ ಅಲ್ಲಿನ ಕನ್ನಡಿಗ ಉದ್ಯೋಗಿಗಳ ಪಾಡೇನಿದೆ ಅನ್ನುವುದಾದ್ರು ಕೇಳಿ ನೋಡಿ.ಅಲ್ಲಿ ಯಾರ ಕಾರು-ಬಾರು ನಡೆಯುತ್ತಿದೆ ಅನ್ನುವುದು ತಿಳಿಯಬಹುದು. ಇವೆಲ್ಲದರ ಸತ್ಯ ದರ್ಶನವಾದರೆ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟರು ಅನ್ನುವಂತೆ ಮಾತಾಡಿರುವುದು ಸುಳ್ಳೇ ಸುಳ್ಳು ಅನ್ನುವುದು ಗೊತ್ತಾಗುತ್ತದೆ.

ಹಿಂದೊಮ್ಮೆ ಕನ್ನಡಿಗರಿಗೆ ಕೆಲಸದಲ್ಲಿ ಆದ್ಯತೆ ಕೊಡಿ ಅಂದಾಗ ನಮಗೊಂದು ಮಾನದಂಡವಿದೆ,ಪ್ರತಿಭಾವಂತರೇ (?) ಬೇಕು ಅಂದಿದ್ರು ಮೂರ್ತಿಯವರು,ಅದಿಕ್ಕೆ ದೇಶದ ಮೂಲೆ ಮೂಲೆಯಿಂದ ಜನ ಬೇಕು ಅಂದಿದ್ರು.ಐ.ಟಿ ಕಂಪೆನಿಯಲ್ಲಿರೋ ಜನರಿಗೆ ಬಹುಷಃ ಹೊರಗಿನಿಂದ ಬಂದವರ ಬುದ್ದಿ ಮತ್ತೆ ಎಂತದ್ದು ಅನ್ನುವುದು ಗೊತ್ತಿರುತ್ತದೆ.ಕಂಪೆನಿಯ ಕ್ಲೈಂಟ್ಗಳಿಗೆ ಅವರ ಕೆಲಸವಾದರೆ ಆಯಿತು,ಅವರೇನು ನಮಗೆ ಬರಿ ಕನ್ನಡಿಗರೇ ಇರುವ ಕಂಪೆನಿ ಬೇಡ ಅಂತಾರಾ? ಅಷ್ಟಕ್ಕೂ ಬರಿ ಕನ್ನಡಿಗರನ್ನೇ ತಗೊಳ್ಳಿ ಅಂತೇನು ಕೇಳಿರ್ಲಿಲ್ಲ ಅಲ್ವಾ? ಇನ್ನು ವಾಕ್-ಇನ್ಗಳನ್ನ ಮಾಡಲು ಹೊರ ರಾಜ್ಯಕ್ಕೆ ಹೋಗಬೇಕಾ? ನಮ್ಮ ರಾಜ್ಯದಲ್ಲೇ ನಾಯಿ ಕೊಡೆಗಳಂತೆ ಇಂಜಿನೀಯರಿಂಗ್ ಕಾಲೇಜುಗಳಿಲ್ವಾ? ನಮ್ಮ ಕಾಲೇಜುಗಳಲ್ಲಿ ಪ್ರತಿಭಾವಂತರಿಲ್ವಾ? ಇಲ್ಲೆ ಕೆಲಸಕ್ಕೊಸ್ಕರ ಅಲೆಯುವ ಜನರಿರೊವಾಗ ಅವರನ್ನೆಲ್ಲ ಬಿಟ್ಟು, ಅನ್ಯ ರಾಜ್ಯದಿಂದ ತುಂಬಿಕೊಂಡು ಬರೋದು ಯಾವ್ ಸೀಮೆ ಉದ್ಯೋಗ ನೀಡಿದ ಹಾಗೆ?

ಕಾಲೇಜಿನಿಂದ ಹೊರ ಬಂದು ಬೆಂಗಳೂರಿನಲ್ಲಿ ಐ.ಟಿ ಕಂಪೆನಿಯೊಂದರಲ್ಲಿ ಅನ್ಯಭಾಷಿಕರ ಪೈಪೋಟಿ ಮತ್ತೆ ಅವ್ರ networking ನಡುವೆ ನಿಂತು ಬಡಿದಾಡಿ ಕೆಲಸ ಪಡೆಯುವುದೆಷ್ಟು ಕಷ್ಟ ಅನ್ನುವುದು ಪಡೆದವರಿಗಷ್ಟೆ ಗೊತ್ತು.ಸುಖಾ ಸುಮ್ಮನೆ ಇಂದು ಎಲ್ಲ ಮಕ್ಕಳು ಬೆಂಗಳೂರಿಗೆ ಬರುತಿದ್ದಾರೆ ಅಂತೇಳಿದರೆ ಸಾಲದು, ಬಂದು ಅವರು ಇಲ್ಲಿ ಪಡಬಾರದ ಪಾಡು ಪಡುವಾಗಲೇ,ಬೇರೆ ರಾಜ್ಯದಿಂದ ಬಂದವ ಅಷ್ಟರಲ್ಲಾಗಲೇ ಯಾವ್ದೋ ಕನ್ನಡಿಗನ ಕಂಪೆನಿಯೊಳಗೆ ಸಲಿಸಾಗಿ ನುಗ್ಗಿರುತ್ತಾನೆ ಇವೆಲ್ಲ ಅರ್ಥ ಆಗುತ್ತಾ? ಬೆಂಗಳೂರಲ್ಲಿ ಅದು ಸರಿ ಇಲ್ಲ ಇದು ಸರಿ ಇಲ್ಲ ಬೆಂಗಳೂರಿಂದ ಗಂಟು ಮೂಟೆ ಕಟ್ತೀನಿ ಅನ್ನುವಂತೆ ಯಾರು ಮಾತಾಡಿದ್ದರು ಅನ್ನುವುದು ಮರೆತು ಹೋಗಿದೆಯೇ? ಹಾಗೆ ನೋಡ ಹೋದರೆ ಅವರು ಸಂಸ್ಥೆ ಕಟ್ಟಿದ್ದು ವ್ಯಾವಹಾರಿಕ ಉದ್ದೇಶಕ್ಕಾಗಿಯಲ್ಲದೇ? ಅದನ್ನ ಕನ್ನಡೀಗರ ಉದ್ದಾರಕ್ಕೆ ಅನ್ನುವ ಮಾತುಗಳೆಲ್ಲ ಕ್ಲೀಷೆಯಲ್ಲದೆ ಮತ್ತಿನ್ನೆನು? ಬೆಂಗಳೂರನ್ನ ಕೇಂದ್ರಾಡಳಿತ ಪ್ರದೇಶ ಮಾಡಿ ಅಂದವ್ರಲ್ಲಿ ತಮ್ಗೆ ಡಾಲರ ಲೆಕ್ಕ ಕಾಣುತ್ತೋ? ಇಲ್ಲ ಕನ್ನಡ ಪ್ರೇಮವೋ?

ಸಾಹಿತಿಗಳೀಗಷ್ಟೆ ಸೀಮಿತವಲ್ಲ ಈ ಸಮ್ಮೇಳನ ಅಂತ ಕೆಲವರು ಹೇಳುತಿದ್ದಾರೆ, ಅಸಲಿಗೆ ಬರಗೂರರ ಪತ್ರದಲ್ಲಿ ಆ ಅಂಶವಿತ್ತಾ? ಇಲ್ಲದಿದ್ದರೆ ಆ ಮಾತನ್ನ ಸೇರಿಸಿ ಏಕೆ ಚರ್ಚೆಯ ಹಾದಿ ತಪ್ಪಿಸುತಿದ್ದಿರಿ? ಅವರೇನು ಕತೆ,ಕವನ,ಪುಸ್ತಕ,ವಿಮರ್ಶೆ ಏನೇನು ಬರ್ಯೋದು ಬೇಡ ಸ್ವಾಮೀ, ಅವರಿಗೆ ಅರಿವಿದ್ದ,ಮಾಡಬಹುದಾಗಿದ್ದ ಕೆಲಸವೆಂದರೆ ಕನ್ನಡ ತಂತ್ರಾಂಶ. ಹೀಗೆ ಅವರ ಕಾರ್ಯವ್ಯಾಪ್ತಿಯೊಳಗೆ ಏನಾದ್ರು ಮಾಡ್ಬಹುದಿತ್ತಲ್ವಾ? ಅದನ್ನ ಮಾಡಿದ್ದಾರಾ? ಅಂತ ಐ.ಟಿ ದಿಗ್ಗಜರ ಕಂಪೆನಿಯಿಂದ ಕನ್ನಡ ತಂತ್ರಾಂಶ ಕ್ಷೇತ್ರಕ್ಕೆನಾದರು ಕೊಡುಗೆ ಸಿಕ್ಕಿದೆಯಾ? ಸಾಹಿತ್ಯ ಕೃಷಿ ಬೇಡ ಸರ್, ಒಂದು ಫಾಂಟು,ಅಥವ ಒಂದು ಉಪಯುಕ್ತ ತಂತ್ರಾಂಶ ಕೇಳೋದು ತಪ್ಪಾ?ಸಮಾಜ ಮುಖಿಯಾದ ಕೆಲಸವಾಗುತ್ತಿದೆ ಮಾಡುತಿದ್ದಾರೆ ಆ ಕಾರಣಕ್ಕೆ ಅವರೇ ಇರಲಿ ಅನ್ನುವವರಿಗೆ ತಿಳಿದಿರಲಿ.ಅದನ್ನ ಇಂದು ಎಲ್ಲ ಕಂಪೆನಿಗಳು ಮಾಡುತ್ತಿವೆ.ಪ್ರತಿ ವಾರಾಂತ್ಯ ಕೆಲವರು ಅದೇ ಕಾರ್ಯಕ್ಕಾಗಿ ಹೊರಟು ನಿಲ್ಲುತ್ತಾರೆ ಅನ್ನುವುದು ನೆನಪಿರಲಿ.ಅಂತದನ್ನ ಕೇವಲ 'ಅವರ' ಸಾಧನೆ ಅನ್ನುವಂತೆ ಬಿಂಬಿಸಬೇಡಿ.ಹಾಗೆ ನೋಡಿದ್ರೆ ಇನ್ಫೋಸಿಸ್ ನಾರಾಯಣ ಮೂರ್ತಿಯವರಿಗಿಂತ ಈ ವಿಷಯದಲ್ಲಿ ವಿಪ್ರೋ ಅಜೀಂ ಪ್ರೇಂಜಿ ಅವರ ಬಳಗವೇ ಹೆಚ್ಚು ಕೆಲಸ ಮಾಡಿದೆ.

ಯಾವುದೇ ಹಿನ್ನೆಲೆಯಿಲ್ಲದೆ ಬಂದು ತನ್ನ ಕರ್ತೃತ್ವಶಕ್ತಿಯ ಬಲದಿಂದ ಒಂದು ದೊಡ್ಡ ಸಂಸ್ಥೆಯೊದನ್ನ ಕಟ್ಟಿದ ನಾರಾಯಣ ಮೂರ್ತಿಯವರು ನಿಜಕ್ಕೂ ನಮಗೆ, ನಮ್ಮ ಮುಂದಿನ ಪೀಳಿಗೆಗೆ ಕೆಲವೊಂದು ವಿಷಯಗಳಲ್ಲಿ ಆದರ್ಶ ವ್ಯಕ್ತಿಯೇ.ಆದರೆ ಅವರ ನಿಜವಾದ ಸಾಧನೆಯ ಬಗ್ಗೆ ಮಾತಾಡುವುದನ್ನ ಬಿಟ್ಟು, ಬೆಂಗಳೂರಿನ ಭಾಗ್ಯದ ಬಾಗಿಲು ತೆಗೆಯಲು, ಒಬಾಮ ಬಾಯಿಯಲ್ಲಿ ಬೆಂಗಳೂರ್ಡ್ ಅನ್ನುವ ಮಾತು ಬರಲು, ಎಲ್ಲರೂ ಬೆಂಗಳೂರಿಗೆ ಬರಲು ಕೇವಲ ಅವರೇ ಕಾರಣ ಅನ್ನುವು ಅತಿರಂಜಿತ ಮಾತುಗಳು ಅವ್ರ ಸಾಧನೆಯನ್ನೇ ಪಕ್ಕಕ್ಕೆ ತಳ್ಳುತ್ತವಷ್ಟೇ!

ಅಸಲಿಗೆ ಬರಗೂರ ಆಕ್ಷೇಪಣೆಯಲ್ಲಿ ತಪ್ಪೇನಿದೆ?ತೆರಿಗೆ ವಂಚನೆ,ಸಾಹಿತ್ಯ ಕ್ಷೇತ್ರ ಎಲ್ಲ ಪಕ್ಕಕ್ಕಿಟ್ಟು ನೋಡಿದರು ಕನ್ನಡ ಭಾಷೆಗೆ,ಕರ್ನಾಟಕಕ್ಕೆ ನಾರಾಯಣ ಮೂರ್ತಿಯವರ ಕೊಡುಗೆಯೇನು? ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕನ್ನಡ ಮಾತಡುವುದಿಲ್ಲ ಅನ್ನುವವರಿಂದ ಯಾವ ಕನ್ನಡ ಪ್ರೇಮದ ನಿರೀಕ್ಷೆಯಿಟ್ಟುಕೊಳ್ಳೋಣ? ನಾಮೂ ಅವರ ಎಪಿಸೋಡ್ ಸಾಲಲಿಲ್ಲ ಅಂತ ಐಶ್ವರ್ಯ ರೈ ಬೇರೆ ಬೇಕಿತ್ತಾ?,ಅಲ್ಲ ಇವ್ರೆಲ್ಲ ಯಾರ್ರಿ? ಆಕೆಗೇನು ಗೊತ್ತು ಕನ್ನಡಿಗರ ಪಾಡು?ಆಕೆಗೆ ಕನ್ನಡವಾದ್ರು ಬರುತ್ತಾ?

ಇದೆಲ್ಲ ಹಾಳಾಗಿ ಹೋಗ್ಲಿ,ನಾರಾಯಣ ಮೂರ್ತಿಯವ್ರೆ ಬೇಕು ಅಂದ್ರೆ ಅವ್ರ ಕೈಯಲ್ಲೆ ಉದ್ಘಾಟನೆ ಮಾಡಿಸಿಕೊಳ್ಳಿ,ಐಶ್ವರ್ಯ ರೈನ ನೋಡ್ಲೆಬೇಕು ಅಂದ್ರೆ ನೋಡ್ಕೊಳ್ಳಿ.ಆದ್ರೆ ನೆನಪಿಡಿ, ವಿಶ್ವ ಕನ್ನಡ ಸಮ್ಮೇಳನ ಅನ್ನುವುದು ಕೇವಲ ಜಾತ್ರೆಯಲ್ಲ,ಕೋಟಿ ಕೋಟಿ ಹಣ ಸುರಿಯೋ ಅಂತ ಕಾರ್ಯಕ್ರಮಗಳಿಂದ ಕನ್ನಡದ ಮಕ್ಕಳಿಗೆ,ಕನ್ನಡ ಭಾಷೆಗೊಂದು ಹೊಸ ದಿಕ್ಕು,ಚೈತನ್ಯ ಮೂಡಿಸುವಂತಿರಬೇಕು.ನಂಜುಂಡಪ್ಪ ವರದಿ,ಸರೋಜಿನಿ ಮಹೀಷಿ ವರದಿಯ ಜಾರಿಯಾಗದೆ ಧೂಳು ತಿನ್ನುತ್ತಾ ಕೂತಿದೆ,ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಲಿ (ಈ ವಿಷಯದಲ್ಲಿ ನಾಣಿ ಅವ್ರ ನಿಲುವು ಗೊತ್ತಿದೆ ಅಲ್ವಾ?) ಅನ್ನೋ ಕೂಗು ಸತ್ತಿದೆ.ಸತ್ತಂತಿಹ ನಮ್ಮ ರಾಜಕಾರಣಿಗಳನ್ನ ಇಂತ ವಿಷಯಗಳ ಮೂಲಕ ಬಡಿದೆಬ್ಬಿಸುವ ಕೆಲಸಗಳು ಈ ಸಮ್ಮೇಳನದಲ್ಲಾಗಲಿ.

ನಾರಾಯಣ ಮೂರ್ತಿಯಾದರು ಗೆಲ್ಲಲಿ,ಬರಗೂರರೇ ಗೆಲ್ಲಲಿ,ಇಲ್ಲ ಯಡ್ಯೂರಪ್ಪನವ್ರೇ ಗೆಲ್ಲಲಿ,ಆದರೆ ಕನ್ನಡಿಗ ಪ್ರತಿ ಬಾರಿ ಸೋತಂತೆ ಈ ಬಾರಿ ಸೋಲದಿರಲಿ.ಹಾಗೆ ಕಡೆಯದಾಗಿ ಪತ್ರಿಕೆಗಳಿಗೊಂದು ಕಿವಿ ಮಾತು, ತೀರ ಇಂತ ಚರ್ಚೆಯ ಬದಲು ಧೂಳು ತಿನ್ನುತ್ತ ಕೂತಿರೋ ವರದಿಗಳ ಬಗ್ಗೆ ಕುಂಭಕರ್ಣ ನಿದ್ರೆಯಲ್ಲಿರೋ ಸರ್ಕಾರವನ್ನ ತಿವಿಯುವಂತ ಮತ್ತು ಆ ಮೂಲಕ ಕನ್ನಡಿಗರಿಗೆ ನ್ಯಾಯ ದೊರಕಿಸುವ ಕೆಲಸವನ್ನಾದ್ರು ಮಾಡಿ

- ರಾಕೇಶ್ ಶೆಟ್ಟಿ


0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

ವಿಶ್ವ ಕನ್ನಡ ಸಮ್ಮೇಳನ ಕಾರ್ಯಕ್ರಮದ ನೇರ ಪ್ರಸಾರ........