ಪುಟಗಳು

ಶುಕ್ರವಾರ, ಮಾರ್ಚ್ 11, 2011

ತಾಯಿ ಭುವನೇಶ್ವರಿ ಪ್ರತಿಮೆ ಹೊತ್ತ ಬಲರಾಮ ಗಾಂಭೀರ್ಯದ ನಡೆ,

ತಾಯಿ ಭುವನೇಶ್ವರಿ ಪ್ರತಿಮೆ ಹೊತ್ತ ಬಲರಾಮ ಗಾಂಭೀರ್ಯದ ನಡೆ, ಕನ್ನಡ ಅಭಿಮಾನಿಗಳ ಜಯ ಘೋಷಣೆಗಳ ಸಂಭ್ರಮದ ನುಡಿ, ಎಲ್ಲೆಡೆ ಹೆಮ್ಮೆಯ ಹಬ್ಬದ ವಾತಾವರಣ. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಗೃಹ ಸಚಿವ ಆರ್ ಅಶೋಕ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಸುಮಾರು 100 ಅಡಿ ಉದ್ದದ ಕನ್ನಡ ಬಾವುಟ ಹಿಡಿದ ಪ್ರವೀಣ್ ಕುಮಾರ್ ಶೆಟ್ಟಿ ನೇತೃತ್ವದ ಕನ್ನಡ ರಕ್ಷಣಾ ವೇದಿಕೆ ಬಳಗದವರು ’ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ’ ಎಂದು ಜಯಧ್ವನಿ ಮೊಳಗಿಸುತ್ತಿದ್ದಾರೆ. ಇನ್ನೊಂದೆಡೆ ಸುಮಾರು 6 ಸಾವಿರಕ್ಕೂ ಅಧಿಕ ಕಲಾವಿದರು ಏರುತ್ತಿರುವ ಬಿಸಿಲನ್ನು ಲೆಕ್ಕಿಸದೆ ಕಲಾ ಪ್ರದರ್ಶನದಲ್ಲಿ ತೊಡಗಿದ್ದಾರೆ.


ಬಲರಾಮನ ಜೊತೆಗೆ ಕೃಷ್ಣಾ, ಸುಧಾ ಆನೆಗಳು ಸಾಗುತ್ತಿರುವ ರೀತಿ ಮೈಸೂರು ದಸರಾ ವೈಭವನ್ನು ನೆನಪಿಸುವಂತಿದೆ. ಪೂರ್ಣಕುಂಭ ಕಲಶ ಹೊತ್ತ 1001 ಮಹಿಳೆಯರು ಕನ್ನಡ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದಾರೆ. ನಂದಿ ಧ್ವಜ ಪೂಜೆ ಪೂರೈಸಿದ ನಂತರ ಸಚಿವ ಅಶೋಕ್, ಗೋವಿಂದ ಕಾರಜೋಳ ಮುಂತಾದ ಜನ ಪ್ರತಿನಿಧಿಗಳ ಸಮೂಹ ತಮ್ಮ ಗೂಟದ ಕಾರಿನತ್ತ ತೆರಳದೆ ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡ ಅಭಿಮಾನಿಗಳ ಹರ್ಷವನ್ನು ಹೆಚ್ಚಿಸಿದರು. ಸಿನಿ ನಟ ನಟಿಯರು ವೋಲ್ವೋ ಬಸ್ ನಲ್ಲೇ ಮೆರವಣಿಗೆ ಸುತ್ತಾ ಸುತ್ತಾಟ ನಡೆಸಿದ್ದು ಅಭಿಮಾನಿಗಳನ್ನು ಕೆರಳಿಸಿತ್ತು.

ಜನಪದ ವೈಭವ: ಪೂಜಾ ಕುಣಿತ, ಪಟ ಕುಣಿತ, ಕೋಲಾಟ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಹುಲಿ ವೇಷ, ಕುದುರೆ ಕುಣಿತ, ತಮಟೆ ಬಡಿತ, ಯಕ್ಷಗಾನದ ವೇಷಗಳು, ಒಂದೇ ಎರಡೇ ಮಾತು ಬರದ ಮೂಗ ಕೂಡಾ ಕನ್ನಡ ಕನ್ನಡ ಎಂದು ಕೂಗುವಂತೆ ಮಾಡಿದೆ. ಕಾಲಿಲ್ಲದವ ಕೂಡಾ ಕನ್ನಡ ಎಂದು ಕುಣಿದಾಡುವಂತೆ ಮಾಡಿದೆ. ನಾಡಿನ ವಿವಿಧೆಡೆಗಳಿಂದ ಬಂದಿರುವ ಸುಮಾರು ಆರು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದಾರೆ. ಸುಮಾರು 6 ಕಿ.ಮೀ ದೂರ ಸಾಗುವ ಈ ಮೆರವಣಿಗೆಯಲ್ಲಿ ದಣಿವಿಲ್ಲದೆ ಕುಣಿವ ಈ ಸಾಂಸ್ಕೃತಿಕ ರಾಯಭಾರಿಗಳಿಗೆ ನಮೋ ನಮಃ

ಮರಾಠಿ ಗೋಡಾ ಥಕ ಥೈ ಥಕ ಕೈ: ಮೆರವಣಿಯಲ್ಲಿ ಪಾಲ್ಗೊಂಡ ಚಿಣ್ಣರು, ಬಿಳಿ ಕುದುರೆ ಹಿಂದೆ ಮುಂದೆ ಸುತ್ತುತ್ತಿದ್ದರು. ಮೈಸೂರಿನಿಂದ ಬಂದ ಒಟ್ಟು 45 ಕುದುರೆಗಳ ಅಶ್ವದಳದ ಲೆಫ್ಟ್ ರೈಟ್ ಮೆರವಣಿಗೆ ಒಂದು ಕಡೆ ಸಾಗಿದ್ದರೆ, ಮಹಾರಾಷ್ಟ್ರದಿಂದ ಬಂದಿರುವ ಬಿಳಿ ಕುದುರೆ ಸೂರಜ್, ಲಕ್ಷ್ಮಣ್ ಜೋಡಿ ಎಲ್ಲರನ್ನೂ ಮೋಡಿ ಮಾಡುತ್ತಿದೆ. ಆಕರ್ಷಕವಾದ ಈ ಬಿಳಿ ಕುದುರೆಗಳು ಸಂಗೀತದ ಮೋಡಿಗೆ ಸಿಲುಕಿದಂತೆ ಥಕ ಥೈ ಥಕ ಥೈ ಎಂದು ಹೆಜ್ಜೆ ಹಾಕುವುದು, ಕೆನೆಯುವುದು ನೋಡುವುದೇ ಆನಂದ. ಮಾತುಂಗದಿಂದ ಬಂದಿರುವ ಕನ್ನಡ ಸಂಘ ಸೇರಿದಂತೆ ಸುಮಾರು 250ಕ್ಕೂ ಹೊರರಾಜ್ಯದಿಂದ ಬಂದಿರುವ ಕಲಾವಿದರೂ ಈ ಕನ್ನಡ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ವಿಶೇಷ. ಗಡಿನಾಡಿನ ನಗರ ಬೆಳಗಾವಿಯು ಕರ್ನಾಟಕದ ಎರಡನೇ ರಾಜಧಾನಿಯಾಗಲಿ ಎಂಬ ಆಶಯವನ್ನು ಮೆರವಣಿಗೆ ಹೊರಟ್ಟಿದ್ದವರಲ್ಲಿ ಹೆಚ್ಚು ಜನರ ಅಭಿಪ್ರಾಯವಾಗಿದೆ.
thatskannada ದ  ವಾರ್ತೆ 

ಗುರುವಾರ, ಮಾರ್ಚ್ 10, 2011

thatskannada ವಾರ್ತೆ

ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನ  ಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಮ್ಮೇಳನದ ತಾಣ ತಲಪುವುದಕ್ಕೆ ದಶದಿಕ್ಕುಗಳಿಂದ ಕನ್ನಡಿಗರು ಬೆಳಗಾವಿ ಮುಖವಾಗಿ ಪ್ರಯಾಣ ಆರಂಭಿಸಿದ್ದಾರೆ. ವ್ಯವಸ್ಥಾಪಕರು ಅಂದಾಜು ಮಾಡಿರುವ ಪ್ರಕಾರ ಸಮ್ಮೇಳನದಲ್ಲಿ ದಿನಂಪ್ರತಿ ಒಂದು ಲಕ್ಷ ಕನ್ನಡಿಗರ ಲೆಕ್ಕದಂತೆ ಮೂರು ದಿನಗಳಲ್ಲಿ ಒಟ್ಟು ಮೂರರಿಂದ ನಾಲಕ್ಕು ಲಕ್ಷ ಜನ ಜಮಾಯಿಸುವ ನಿರೀಕ್ಷೆಯಿದೆ.

ಇವರಲ್ಲಿ ಸ್ಥಳೀಯರ ಪಾಲು ಹೆಚ್ಚು. ಬೆಳಗಾವಿಯಲ್ಲದೆ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸುವ 'ಕನ್ನಡ ತೇರು'ಗಳ ಜತೆಗೆ ಹೊರನಾಡ ಕನ್ನಡಿಗರು  , ಗಡಿನಾಡ ಕನ್ನಡಿಗರು, ಅನಿವಾಸಿ ಕನ್ನಡಿಗರು ಮತ್ತು ಬೆಂಗಳೂರು ಕನ್ನಡಿಗರೂ ಹೆಚ್ಚು ಸಂಖ್ಯೆಯಲ್ಲಿ ಇರುತ್ತಾರೆ. ಮುಂಬೈಯಿಂದಲೇ ಸಾವಿರ, ನವದೆಹಲಿಯಿಂದಲೇ ಐದುನೂರು, ಕಡಲಾಚೆಯ ದೇಶಗಳ ಸುಮಾರು 250 ಕನ್ನಡಿಗರು ಬಂದಿಳಿಯಲಿದ್ದಾರೆ.

ಸಮ್ಮೇಳನಕ್ಕೆ ಬೆಳಗಾವಿ ರೈಲು ಹತ್ತುವ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ದಟ್ಸ್ ಕನ್ನಡ  ದೊಂದಿಗೆ ಮಾತನಾಡಿ, ಸಮ್ಮೇಳನ ಕುರಿತ ಹಲವು ಮಾಹಿತಿಗಳನ್ನು ಹಂಚಿಕೊಂಡರು. ಮಾತುಕತೆಯ ಮುಖ್ಯಾಂಶಗಳು ಇಂತಿವೆ.

* ರಾಜ್ಯೋತ್ಸವ ಪ್ರಶಸ್ತಿ ಬೇಡಿ ಪ್ರತಿವರ್ಷ 3000 ಮಂದಿ ನಮ್ಮ ಇಲಾಖೆಗೆ ಅರ್ಜಿಹಾಕಿಕೊಳ್ಳುತ್ತಾರೆ. ಆದರೆ ಈ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವುದಕ್ಕೆ ನಮಗೂ ಅವಕಾಶ ಕೊಡಿ ಎಂಬ 5,500 ಬೇಡಿಕೆಗಳು ಬಂದಿವೆ. ಬಹುತೇಕ ಎಲ್ಲ ಕಲಾವಿದರನ್ನು ಸಮ್ಮೇಳನ ಅಪ್ಪಿಕೊಳ್ಳುತ್ತದೆ.

ಎನ್ಆರ್ ನಾರಾಯಣ ಮೂರ್ತಿ, ಬಿಎಸ್ ಯಡಿಯೂರಪ್ಪ, ಯುಆರ್ ಅನಂತ ಮೂರ್ತಿ, ಜಿಎಸ್ ಶಿವರುದ್ರಪ್ಪ, ದೇ. ಜವರೇಗೌಡ, ಪಾಟೀಲ ಪುಟ್ಟಪ್ಪ ಅವರಂಥ ಘಟಾನುಘಟಿ ಕನ್ನಡಿಗರಲ್ಲದೆ ಗಣ್ಯರು ಮತ್ತು ಅತಿಗಣ್ಯರ ಬೃಹತ್ ಸೈನ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಲಿದೆ. 14 ವೇದಿಕೆಗಳಲ್ಲಿ ಸಮಾನಾಂತರವಾಗಿ ಹತ್ತಾರು ಬಗೆಯ ಗೋಷ್ಠಿಗಳು ಜರುಗಿದರೆ ಜಿಲ್ಲೆಯ ಕ್ರೀಡಾ ಮೈದಾನದಲ್ಲಿ ಹಾಕಿರುವ ಕಿತ್ತೂರು ರಾಣಿ ಚೆನ್ನಮ್ಮ ವೇದಿಕೆಯು ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮಗಳಿಗೆ ಭೂಮಿಕೆ ಆಗುತ್ತದೆ. ಜತೆಗೆ ಜವಾಹರಲಾಲ್ ಮೆಡಿಕಲ್ ಕಾಲೇಜು ಕ್ರೀಡಾಂಗಣದಲ್ಲೂ ಕಾರ್ಯಕ್ರಮಗಳು ಸಾಲು ಸಾಲಾಗಿ ನಡೆಯುತ್ತವೆ.

* ಏಳು ಕಡೆಗಳಲ್ಲಿ ಭೋಜನಕ್ಕೆ ವ್ಯವಸ್ಥೆ ಇರುತ್ತದೆ. ಪ್ರತಿನಿಧಿಗಳು ತಮಗೆ ಅನುಕೂಲವಾದ, ಹತ್ತಿರವಾದ ಭೋಜನ ಶಾಲೆಯನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು. ಗಣ್ಯರಾಗಲೀ, ಶ್ರೀಸಾಮಾನ್ಯರಾಗಲೀ ಎಲ್ಲರಿಗೂ ಒಂದೇ ಪಾತ್ರೆಯಲ್ಲಿ ಮಾಡಿದ ಅಡುಗೆ ಬಡಿಸಲಾಗುತ್ತದೆ. ಬೆಳಗಾವಿ ನಗರ ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲಿ ಲಭ್ಯವಿರುವ ಎಲ್ಲ ವಸತಿ ಅವಕಾಶಗಳನ್ನು ಸಮ್ಮೇಳನಕ್ಕಾಗಿ ದುಡಿಸಿಕೊಳ್ಳಲಾಗುತ್ತಿದೆ.

* ಐಶ್ವರ್ಯ ರೈ ಸಮೀಪ ದರ್ಶನದ ಪುಳಕದ ಜತೆಗೆ ಯಥಾಪ್ರಕಾರ ಪುಸ್ತಕ ಮಳಿಗೆಗಳು ವಿಶೇಷ ಆಕರ್ಷಣೆ ಆಗುವುದು ಖರೆ. ಇದರಲ್ಲಿ ರಾಜ್ಯ ಸರಕಾರದ ಮಳಿಗೆಗಳೂ ಇರುತ್ತವೆ. ಇಲಾಖೆ ಹೊರತಂದಿರುವ ಒಂದು ನೂರು ಮೇರು ಕೃತಿಗಳ ಬಿಡುಗಡೆ, ಮಾರಾಟ ಮಾಡಲಾಗುತ್ತದೆ. ಸಾಂದರ್ಭಿಕ ಕೃತಿ 'ಪುನಾರವಲೋಕನ'ದ ಜತೆಗೆ ಬೆಳಗಾವಿ ಜಿಲ್ಲೆಯ ಮಹತ್ವ ಬಿಂಬಿಸುವ ಎರಡು ಕೃತಿಗಳು ನಿಮಗಾಗಿ ಕಾದಿವೆ. ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿ ತೋರಿಸಿದರೆ ಪುಸ್ತಕ ಖರೀದಿಯಲ್ಲಿ ಶೇ.30ರಷ್ಟು ರಿಯಾಯಿತಿಯನ್ನು ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಗೋವಿಂದ ಕಾರಜೋಳ ಪ್ರಕಟಿಸಿದ್ದಾರೆ.

* ರಾಣಿ ಚೆನ್ನಮ್ಮ ಮತ್ತು ತಾಯಿ ಭುವನೇಶ್ವರಿಯ ಎರಡಾಳೆತ್ತರದ ಹೂವಿನ ಪ್ರತಿಕೃತಿಗಳನ್ನು ತೋಟಗಾರಿಕೆ ಇಲಾಖೆ ಪ್ರಸ್ತುತ ಪಡಿಸುತ್ತದೆ. ಸರ್ಕೀಟ್ ಹೌಸ್ ಪಕ್ಕದಲ್ಲಿ ನೀವಿದನ್ನು ಕಾಣಬಹುದು. ಕ್ಯಾಮರಾ ತಂದಿರಿ. ಅಂದಹಾಗೆ, ಪ್ರತಿನಿಧಿಗಳನ್ನು ಸ್ವಾಗತಿಸುವ ಮತ್ತು ಅವರಿಗೆ ಮಾರ್ಗದರ್ಶನ ಮಾಡುವ ಸ್ವಾಗತ ಕಚೇರಿಗಳನ್ನು ತೆರೆಯಲಾಗಿದೆ. ಇಂಥ 50 ಕೌಂಟರುಗಳು ಇರುತ್ತವೆ. ವಿಚಾರಣೆಗೆ ಫೋನ್ ನಂಬರ್ ಗುರುತುಹಾಕಿಕೊಳ್ಳಿ, ರಘು 98454 02056.

* ಇಪ್ಪತ್ತೈದು ವರ್ಷಗಳ ನಂತರ ನಡೆಯುತ್ತಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನ ಗಾತ್ರದಲ್ಲಿ ಮತ್ತು ಪಾತ್ರದಲ್ಲಿ ಬೃಹತ್ತನ್ನೂ ಮತ್ತು ಮಹತ್ತನ್ನೂ ಆಕರ್ಷಿಸಿಕೊಂಡಿದೆ. ಇಂಥ ಸಮ್ಮೇಳನ ಹಿಂದೆ ನಡೆದಿಲ್ಲ, ಮುಂದೆ ಗೊತ್ತಿಲ್ಲ ಎನ್ನುತ್ತಾರೆ ಮನು ಬಳಿಗಾರ್. ಕನ್ನಡ ಸಂಸ್ಕೃತಿ  ಇಲಾಖೆಯಿಂದ 30 ಕೋಟಿ, ಲೋಕೋಪಯೋಗಿ ಇಲಾಖೆಯಿಂದ 10 ಕೋಟಿ, ನಗರಾಭಿವೃದ್ಧಿ ಇಲಾಖೆ ವತಿಯಿಂದ 7 ಕೋಟಿ, ಹೀಗೆ ನಾನಾ ಇಲಾಖೆಗಳು ಕಲೆತು ಒಟ್ಟು 50 ಕೋಟಿ ರೂಪಾಯಿ ವೆಚ್ಚದಲ್ಲಿ ಸಮ್ಮೇಳನ ಗರಿಕೆದರಲಿದೆ. ನೀವೂ ಬೆಳಗಾವಿಗೆ ಹೋಗಿ ಬನ್ನಿ. ಮುದ್ದಾಂ ಭಾಗವಹಿಸಲಾಗದಿದ್ದರೆ ಬೆಳಗಾವಿಯಿಂದ ದಟ್ಸ್ ಕನ್ನಡ ನಿಮಗೆ ತಲುಪಿಸುವ ನೇರ ವರದಿಗಳನ್ನು ನೋಡುತ್ತಿರಿ.

ಬುಧವಾರ, ಮಾರ್ಚ್ 9, 2011

ಕನ್ನಡ ನನಗೆ ಆಪ್ಯಾಯಮಾನ: ಎನ್ನಾರೆನ್

ಸಮ್ಮೇಳನದ ಉದ್ಘಾಟಕರಾದ ಇನ್ಫೋಸಿಸ್ ಕಂಪನಿಯ ಪ್ರವರ್ತಕ ಎನ್.ಆರ್. ನಾರಾಯಣ ಮೂರ್ತಿ ಅವರು ಬೆಂಗಳೂರಿನಲ್ಲಿ ನೀಡಿರುವ ಪತ್ರಿಕಾ ಸಂದರ್ಶನಲ್ಲಿ ಕನ್ನಡ, ಕನ್ನಡಿಗ, ಕನ್ನಡ ನಾಡಿನ ಬಗ್ಗೆ ತಮ್ಮ ಅಂತರಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಸಂರ್ಶನ ಆಯ್ದ ಭಾಗ ಹೀಗಿದೆ:

'ಭಾಷೆ ಎಂಬುದು ನನಗೆ ತುಂಬಾ ಮಹತ್ವದ್ದು. ಇಂದಿಗೂ ನಾನು ಮನೆಯಲ್ಲಿ ಕನ್ನಡದಲ್ಲಿಯೇ ಮಾತನಾಡುವುದು. ಅದು ನನಗೆ ಆಪ್ಯಾಯಮಾನವಾಗಿರುತ್ತದೆ. ನನ್ನ ಭಾವನೆಗಳನ್ನು ಕನ್ನಡದಲ್ಲಿ ಮಾತ್ರವೇ ವ್ಯಕ್ತಪಡಿಸಲು ನನಗೆ ಸಾಧ್ಯ. ನನ್ನ ತಾಯಿಗೆ ಕನ್ನಡದಲ್ಲಿಯೇ ಬರೆಯುವೆ ' ಎಂದು ಇನ್ಫೋಸಿಸ್ ನಾರಾಯಣ ಮೂರ್ತಿ ಮನದ ಮಾತನ್ನು ಹೇಳಿದ್ದಾರೆ. 

ನೋಡಿ, ನನಗೆ ಕೋಪ ಬಂದಾಗ ಅತ್ಯಂತ ಸಹಜವಾಗಿ ಅಚ್ಚ ಕನ್ನಡದಲ್ಲಿ ಕೂಗಾಡುವೆ. ನನಗಾಗುವ ಸಂತೋಷ ಕನ್ನಡದಲ್ಲಿಯೇ ಉಕ್ಕಿಬರುತ್ತದೆ. ಸಾಹಿತ್ಯಿಕವಾಗಿ ಕನ್ನಡ ನನಗೆ ಆಪ್ತವಾಗುತ್ತದೆ. ಅದೇ ತಂತ್ರಜ್ಞಾನದ ಬಗ್ಗೆ ಓದಬೇಕು ಎಂದುಕೊಂಡಾಗ ಖಂಡಿತ ಇಂಗ್ಲಿಷ್ ಅನ್ನೇ ಬಳಸಿಕೊಳ್ಳುವೆ. ತಂತ್ರಜ್ಞಾನ ಅರಿಯಲು ಆಂಗ್ಲ ಭಾಷೆ ಅತ್ಯಂತ ಸಮಂಜಸವಾಗಿರುತ್ತದೆ ಎಂದು ಕನ್ನಡದ ವ್ಯಾಮೋಹ ಮತ್ತು ಇಂಗ್ಲಿಷ್ ನ ಅನಿವಾರ್ಯತೆಯನ್ನು ಅವರು ತೆರೆದಿಟ್ಟಿದ್ದಾರೆ. 

'ಕನ್ನಡದಲ್ಲಿ ಪಠ್ಯಗಳನ್ನು ಅತ್ಯುತ್ತಮವಾಗಿ ರಚಿಸಿ. ಗಣಿತ, ವಿಜ್ಞಾನದಲ್ಲಿ ವಿಶ್ವ ದರ್ಜೆಯ ಶಾಲಾ ಪುಸ್ತಕಗಳನ್ನು ಹೊರತನ್ನಿ. ಕನ್ನಡ ಸಭೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಹುರಿದುಂಬಿಸಿ. ಕನ್ನಡವನ್ನೇ ಬಿಂಬಿಸಿ. ಆದರೆ ಇತರೆ ಭಾಷೆಗಳಿಗೆ ಕುರುಡಾಗಿ ಕನ್ನಡಕ್ಕೆ ಜೋತು ಬೀಳುವ ಮನೋಭಿಲಾಷೆ ಬೇಡ' ಎಂಬ ಎಚ್ಚರಿಕೆಯನ್ನೂ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟಕರಾಗಿ ಎನ್ನಾರೆನ್ ನೀಡಿದ್ದಾರೆ.

'ಕನ್ನಡ ಬಲಿಷ್ಠವಾಗಿರಬೇಕು ಎಂದರೆ ಕನ್ನಡಿಗರು ಸದೃಢರಾಗಬೇಕು. ಕನ್ನಡಿಗರು ಸದೃಢಬೇಕೆಂದರೆ ಕರ್ನಾಟಕ ಬಲಶಾಲಿಯಾಗಬೇಕು. ಕೊನೆಗೆ ಕರ್ನಾಟಕ ಬಲಶಾಲಿಯಾಗಿರಬೇಕು ಎಂದರೆ ಕನ್ನಡಿಗರಿಗೆ ಹೆಚ್ಚು ಆದಾಯ ತರುವಂತಹ ಉದ್ಯೋಗಗಳನ್ನು ಸೃಷ್ಟಿಸಬೇಕು. ಇನ್ಫೋಸಿಸ್ ಅಂತಹ ಕಂಪನಿಗಳು ಇದನ್ನೇ ಮಾಡುತ್ತಿರುವುದು. ಇದರ ಬಗ್ಗೆ ನಮಗೆ ತುಂಬಾ ತುಂಬಾ ಹೆಮ್ಮೆಯಿದೆ' ಎಂದು ಕನ್ನಡ, ಕರ್ನಾಟಕ, ಕನ್ನಡಿಗರ ಸ್ಥಿತಿಗತಿಗಳ ಬಗ್ಗೆ ಅವರು ತಮ್ಮ ತರ್ಕಬದ್ಧ ನಿಲುವನ್ನು ಸ್ಪಷ್ಟಪಡಿಸಿದರು. 

ವಿಶ್ವದಾದ್ಯಂತ ಅನೇಕ ಸಮ್ಮೇಳನಗಳಲ್ಲಿ ಆಮಂತ್ರಿತನಾಗಿ ಭಾಗವಹಿಸುವ ಪರಿಪಾಠ ಇಟ್ಟುಕೊಂಡಿರುವುದಾಗಿ ಹೇಳಿದ ನಾರಾಯಣ ಮೂರ್ತಿ ಅವರು 'ಇಂತಹ ಸಭೆಗಳಲ್ಲಿ ಯುವಜನತೆಯನ್ನು ಹುರಿದುಂಬಿಸಿ ಮಾತನಾಡುವೆ. ಬೆಳಗಾವಿಯಲ್ಲಿ ನಡೆಯುವ ಕನ್ನಡ ಸಮ್ಮೇಳನಕ್ಕೆ ನಾನಾ ಆಯಾಮಗಳು ಇವೆಯೆಂಬುದನ್ನು ಬಲ್ಲೆ. ಇಲ್ಲಿ ಅಸಂಖ್ಯಾತ ಯುವಕರು ಭಾಗವಹಿಸಲಿದ್ದಾರೆ. ಅದು ಇಷ್ಟವಾಗಿ ಸಮ್ಮೇಳನದ ಉದ್ಘಾಟನೆಗೆ ಒಪ್ಪಿಕೊಂಡೆ' ಎಂದು ತಿಳಿಸಿದ್ದಾರೆ. ಅಂದಹಾಗೆ, ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಗೆ ಮಂಗಳವಾರ ನೀಡಿರುವ ಸಂದರ್ಶನದಲ್ಲಿ ನಾರಾಯಣ ಮೂರ್ತಿ ಈ ಮಾತುಗಳ್ನು ಹೇಳಿದ್ದಾರೆ:ಕೃಪೆ:thatskannada

ಬೆಳಗಾವಿಯಲ್ಲಿ ಕನ್ನಡವಿಲ್ಲವೆಂದೋರು ಯಾರು? ಯಾರದು?

ಇಡೀ ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ಹೇಗೆ ವೈವಿಧ್ಯತೆಯನ್ನು ಹೊಂದಿದೆಯೋ ಹಾಗೇನೆ ಸಾಂಸ್ಕೃತಿಕವಾಗಿ ಭಾರೀ ವೈವಿಧ್ಯತೆಯನ್ನು ಹೊಂದಿದೆ. ಅದಕ್ಕೆ ಕಾರಣಗಳು ಅಂದ್ರೆ ಜಿಲ್ಲೆಯ ವಿಸ್ತೀರ್ಣ ವ್ಯಾಪ್ತಿ ಮತ್ತು ಗಡಿ ರಾಜ್ಯದ ದಟ್ಟ ಪ್ರಭಾವ. ಬೆಳಗಾವಿ ಅಂದಾಕ್ಷಣ ಭಾರೀ ಮರಾಠಿ ಪ್ರಭಾವ ಇದ್ದು ಕನ್ನಡಾಂಬೆ ಅಪಾಯದ ಅಂಚಿನಲ್ಲಿ ಇದ್ದಾಳೆ ಎಂಬ ತಪ್ಪು ಕಲ್ಪನೆ ಅನೇಕರಿಗೆ ಇದೆ. ನಿಮಗೆ ಗೊತ್ತಿರಲಿ ಇಡೀ ಜಿಲ್ಲೆಯಲ್ಲಿ ಮರಾಠಿ ವ್ಯಾಪ್ತಿ ಕೇವಲ ಶೇ.15-18 ಮತ್ತು ಉರ್ದು ವ್ಯಾಪ್ತಿ ಶೇ.8-10. ಸ್ವಲ್ಪ ಮಟ್ಟಿಗೆ ಕೊಂಕಣಿ ಇದ್ದರೂ ಅದು ಅಷ್ಟೇನು ಪ್ರಭಾವಿ ಆಗಿಲ್ಲ. ಬಾಕಿ ಎಲ್ಲಾ ಕನ್ನಡವೇ.

ಮೊದಲೂ ಬಾಕಿ ಪ್ರದೇಶಗಳ ಬಗ್ಗೆ ಹೇಳಿ ನಂತರ ಕುಂದಾನಗರಿಗೆ ಬರುತ್ತೇನೆ. ಜಿಲ್ಲೆಯ ಬೈಲಹೊಂಗಲ, ಸವದತ್ತಿ, ರಾಮದುರ್ಗ, ಗೋಕಾಕ, ರಾಯಬಾಗ ತಾಲ್ಲೂಕುಗಳು ಅಚ್ಚ ಕನ್ನಡದ ಕಂದಮ್ಮಗಳು. ಇಲ್ಲಿ ಮರಾಠಿ ಪ್ರಭಾವ ಇಲ್ಲವೇ ಇಲ್ಲ ಅನ್ನುವಷ್ಟು ಕನ್ನಡ ಅಚ್ಚೊತ್ತಿದೆ. ಹುಕ್ಕೇರಿ ಮತ್ತು ಅಥಣಿ ತಾಲ್ಲೂಕುಗಳು ಮಹಾ ರಾಜ್ಯದೊಂದಿಗೆ ಗಡಿ ಹಂಚಿಕೊಳ್ಳುತ್ತವೆಯಾದರೂ, ಗಡಿ ಆಚೆ ಇರುವ ಕೆಲವು ಊರುಗಳು ಕೂಡ ಕನ್ನಡ ಪ್ರದೇಶಗಳೇ ಆದ್ದರಿಂದ ಇಡಿಯಾಗಿ ತಾಲ್ಲೂಕಗಳು ಮರಾಠಿ ಪ್ರಭಾವಕ್ಕೆ ಒಳಗಾಗಿಲ್ಲ. ಆದ್ರು ಇಲ್ಲಿ ಮರಾಠಾ ಜಾತಿಯ ಜನರ ಸಂಖ್ಯಾಬಲ ಸ್ವಲ್ಪ ಮಟ್ಟಿಗೆ ಇರುವುದರಿಂದ ಮರಾಠಿ ಇದೆ. ಹಾಗೇನೆ ಅನೇಕ ಕನ್ನಡಿಗರೂ ಕೂಡ ಮರಾಠಿ ಬಲ್ಲವರಾಗಿದ್ದರೆ.

ಇನ್ನು ನನ್ನ ಸ್ವಂತ ಚಿಕ್ಕೋಡಿ ತಾಲ್ಲೂಕಿನ ವಿಷಯಕ್ಕೆ ಬಂದ್ರೇ, ಗಡಿ ಭಾಗದ ನಲವತ್ತು ಹಳ್ಳಿಗಳಲ್ಲಿ ಮತ್ತು ನಿಪ್ಪಾಣಿ ಎಂಬಲ್ಲಿ ಎಪ್ಪತ್ತು ಸಾವಿರ ಜನಸಂಖ್ಯೆ ಇದ್ದು ಜಿಲ್ಲೆಯ ಮೂರನೇ ದೊಡ್ಡ ನಗರವಾಗಿದೆ. ನಗರದಲ್ಲಿ ಶೇ.90-95ಕ್ಕಿಂತಲೂ (ನನ್ನ ಊರಂತೂ ಶೇ.100) ಮರಾಠಿಮಯವಾಗಿವೆ. ಇಲ್ಲಿ ಕನ್ನಡ ಕೇಳಿ ಬರುವುದೇ ಅಪರೂಪ. ಅದೇನಿದ್ದರೂ ಹೊರಗಿನವರರಿಂದ. ಅತ್ಯಂತ ಆಶ್ಚರ್ಯದ ವಿಷಯವೆಂದರೆ, ಜಿಲ್ಲೆಯಲ್ಲಿ ರಾಜಕೀಯವಾಗಿ ಪ್ರಾಬಲ್ಯವಿರುವ ಲಿಂಗಾಯಿತರು ಕೂಡ ಈ ಭಾಗದಲ್ಲಿ ಮರಾಠಿ ಮಾತೃಭಾಷೆಯವರಾಗಿರೋದು. ಇತ್ತೀಚಿಗೆ ಅನೇಕರು ಕನ್ನಡ ಕಲಿತಿದ್ದಾರೆ. ಕನ್ನಡ ಪ್ರಭಾವಿ ಪ್ರದೇಶದಿಂದ ಮದುವೆಗಳು, ನೆಂಟಸ್ತನಗಳು ಸಾಮಾನ್ಯವಾದಾಗಿನಿಂದ ಇಲ್ಲಿ ಕೂಡ ಕನ್ನಡ ಬೆಳೆಯುತ್ತಿದೆ. (ಪ್ರಭಾಕರ ಕೋರೆಯವರ ಕುಟುಂಬ ಒಳ್ಳೆಯ ಉದಾಹರಣೆ).

ಇದನ್ನೂ ಓದಿ : ಬೆಳಗಾವಿ ಜಿಲ್ಲೆ ಬಗ್ಗೆ ನಿಮಗೆಷ್ಟು ಗೊತ್ತು?

ಕೆ.ಎಲ್.ಇ ಮತ್ತು ಮತ್ತು ಕೆಲವು ಮಠಗಳು ತಮ್ಮ ಶಿಕ್ಷಣ ಸಂಸ್ಥೆಯ ವತಿಯಿಂದ ಕನ್ನಡದ ಕಂಪನ್ನು ಇಲ್ಲಿ ಪಸರಿಸುತ್ತಿವೆ. ಇಲ್ಲಿನ ಮತ್ತೊಂದು ಅಚ್ಚರಿ ಅಂದ್ರೇ ಒಂದು ಊರಿಂದ ಇನ್ನೊಂದು ಊರಿಗೆ ಭಾಷೆಯೇ ಬದಲಾಗುವುದು. ನನ್ನ ಪಕ್ಕದ 5 ಕಿ.ಮೀ. ಅಂತರದ ಊರಿನಲ್ಲಿ ಕನ್ನಡ ಶೇ.50ಕ್ಕಿಂತಲೂ ಹೆಚ್ಚು. ಖಾನಾಪುರ ಕೂಡ ನಿಪ್ಪಾಣಿಗಿಂತ ಏನೂ ಭಿನ್ನವಾಗಿಲ್ಲ. ಅಲ್ಲಿಯೂ ಕೂಡ ಕನ್ನಡ ಬಲಶಾಲಿಯಾಗಿಯೆ ಬೆಳೆಯುತ್ತಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇದೇ ತಾಲ್ಲೂಕಿನ ನಂದಗಡದವರು. ಇನ್ನು ಬೆಳಗಾವಿ ತಾಲ್ಲೂಕಿನ ವಿಷಯಕ್ಕೆ ಬಂದರೆ ಪಶ್ಚಿಮ ಮತ್ತು ಉತ್ತರ ಭಾಗ ಮರಾಠಿಯ ದಟ್ಟ ಪ್ರಭಾವದಲ್ಲಿ ಇದೆ. ಅದೇ ಪೂರ್ವ ಮತ್ತು ಮತ್ತು ದಕ್ಷಿಣಕ್ಕೆ ಬಂದರೆ ಮರಾಠಿ ಸತ್ತೇ ಹೋಯಿತೆನೋ ಅನ್ನೊವಷ್ಟು ಕನ್ನಡದ ಛಾಯೆ ಇದೆ. ಬೆಳಗಾವಿಯ ನಗರದ ಬಗ್ಗೆ ಹೇಳುವುದಾದರೆ ಇಲ್ಲಿ ಯಾವುದು ಹೆಚ್ಚು ಯಾವುದು ಕಡಿಮೆ ಅಂತ ಹೇಳುವುದಕ್ಕೆ ನನಗೆ ಆಗುವುದಿಲ್ಲ. ಬಹುತೇಕರಿಗೆ ಎರಡು ಭಾಷೆಗಳು ಬರುತ್ತವೆ. ನಾನ್ಯಾಕೆ ಕನ್ನಡ ಕಲಿಯಲಿ ಅನ್ನುವ ಉಡಾಫೆಯ ಕೆಲವು ಬೆರಳೆಣಿಕೆಯ ಮರಾಠಿಗರು ಇಲ್ಲಿ ಇದ್ದಾರೆ. ಇದೇ ಹಟದ ಕಾರಣದಿಂದಾಗಿ ಮರಾಠಿ ಕಲಿಯದ ಕನ್ನಡಿಗರೂ ಇದ್ದಾರೆ.

ಕನ್ನಡ ವಿಜೃಂಭಿಸುತ್ತಿದೆ : ರಾಜಕೀಯ ಮತ್ತು ಇತರೆ ಅಂಕೆ ಸಂಖ್ಯೆಗಳು ಏನೇ ಇರಲಿ ಇಲ್ಲಿ ಕನ್ನಡ ಮಾತ್ರ ವಿಜೃಂಭಿಸುತ್ತಿದೆ. ಬೆಳಗಾವಿ ಮತ್ತು ಖಾನಪುರದ ಮರಾಠಿಗರ ಬಹುತೇಕ ಹಳೆ ತಲೆಗಳು ಭಾಷಾಂಧರು. ಇದರಿಂದಾಗಿಯೆ ಎಮ್.ಇ.ಎಸ್ ಎಂಬ ದಪ್ಪ ಚರ್ಮದ, ಕಿಡಿಗೇಡಿಗಳ ಸಂಘಟನೆ ಬೆಳೆದದ್ದು. ಈಗಿನ ಯುವ ಜನಾಂಗ ಬದಲಾಗಿದೆ ಆದ್ರು ಎಮ್.ಇ.ಎಸ್ ಬೇರು ಸಮೇತ ಕಿತ್ತು ಹೋಗುವವರೆಗು ಗಲಾಟೆ ಗದ್ದಲ ಇದ್ದದ್ದೆ. ನಮ್ಮ ನಿಪ್ಪಾಣಿ ಭಾಗ ಹೆಚ್ಚು ಮರಾಠಿ ಪ್ರಾಬಲ್ಯ ಹೊಂದಿದ್ದರು ಕೂಡ ಯಾವುದೇ ಗಲಾಟೆ ಗದ್ದಲಗಳು ಇಲ್ಲ. ಎಮ್.ಇ.ಎಸ್ ಅಂತೂ ಇಲ್ಲಿ ಸತ್ತು ಹೋಗಿದೆ. ಶಿವಸೇನೆಯನ್ನು ಮೂಸಿ ನೋಡುವವರಿಲ್ಲ. ನಮ್ಮ ಕನ್ನಡದ್ದೆ ಆದ ಜೆ.ಡಿ.ಎಸ್ ನಗರಸಭೆಯಲ್ಲಿ ಆಳ್ವಿಕೆ ನಡೆಸುತ್ತಿದೆ. ಶೇ.90ಕ್ಕಿಂತಲೂ ಹೆಚ್ಚಿನ ಶ್ರೀಸಾಮಾನ್ಯನಿಗೆ ಗಡಿ ಬಿಡಿ ವಿಷಯದಲ್ಲಿ ಆಸಕ್ತಿಯೇ ಇಲ್ಲ. ಅದು ಬಗೆ ಹರಿದರೆಷ್ಟು ಬಿಟ್ಟರೆಷ್ಟು. ಯಾವ ಊರು ಯಾವ ರಾಜ್ಯಕ್ಕೆ ಹೋದರೇನು ಎಂಬ ನಿರ್ಲಿಪ್ತ ಭಾವನೆ ಇದೆ. ಗಡಿಬಿಡಿ ಗಲಾಟೆ ಬರೀ ಕೆಲವು ಸಂಘಟನೆಗಳಿಗೆ ಮಾತ್ರ ಬೇಕಾಗಿದೆ. ನನ್ನಂತವರಿಗೆ ಇದರಿಂದ ಆದಷ್ಟೂ ಬೇಗ ಮುಕ್ತಿ ಬೇಕಾಗಿದೆ (ಇದರ ಕುರಿತು ಈಗಾಗಲೇ ದಟ್ಸ್-ಕನ್ನಡದಲ್ಲಿ ನನ್ನ ಲೇಖನ ಪ್ರಕಟವಾಗಿದೆ).

ಉತ್ತರ ಕರ್ನಾಟಕದ ಸಂಸ್ಕೃತಿಯ ಬಹುತೇಕ ಅಂಶಗಳನ್ನು ಜಿಲ್ಲೆ ಹೊಂದಿದೆ. ವೀರಶೈವ ಸಂಸ್ಕೃತಿ ಜಿಲ್ಲೆಯ ಪ್ರಭಾವಿ ಸಂಸ್ಕೃತಿಯಾಗಿದೆ. ಜೈನ್ ಸಮುದಾಯ ಕೂಡ ತನ್ನ ಛಾಪನ್ನು ಕೆಲವು ಕಡೆ ಇಲ್ಲಿ ಮೂಡಿಸಿದೆ. ಇದರಲ್ಲಿ ಮರಾಠಿ ಮತ್ತು ಕನ್ನಡ ಎಂಬ ಎರಡು ವರ್ಗಗಳಿವೆ. ಮರಾಠಿ ಭಾಗದಲ್ಲಿ ಮತ್ತು ಕೆಲವು ಕಡೆ ಮರಾಠಾ ಸಂಸ್ಕೃತಿ ತನ್ನ ಎಲ್ಲೆ ಬೀಸಿದೆ. ಬ್ರಾಹ್ಮಣ ಸಂಸ್ಕೃತಿ ಹೆಚ್ಚಾಗಿ ನಗರ ಪ್ರದೇಶಕ್ಕೆ ಸೀಮಿತ. ಇದರಲ್ಲೂ ಮರಾಠಿ ಮತ್ತು ಕನ್ನಡ ವರ್ಗಗಳು. ಹಿಂದುಳಿದ ವರ್ಗಗಳ ವಿಷಯಕ್ಕೆ ಬಂದರೆ ಕುರುಬರು ನಿರ್ಣಾಯಕರು. ದಲಿತರಲ್ಲಿ ಪ್ರಮುಖವಾಗಿ ಬೇಡರ ಸಂಸ್ಕೃತಿಯ ಛಾಯೆ ಇದೆ. ಇಸ್ಲಾಂ ಕೂಡ ಬರೀ ನಗರ ಪ್ರದೇಶಕ್ಕೆ ಸೀಮಿತ. ಊಟ ಮತ್ತು ಉಡಿಗೆ ತೊಡಿಗೆ ಎಲ್ಲ ಮಹಾ ರಾಜ್ಯ ಮತ್ತು ಉ.ಕ. ಶೈಲಿಯಲ್ಲೆ ಇದೆ. ಬೆಳಗಾವಿ ಕುಂದಾ ಮತ್ತು ಗೋಕಾಕ ಕರದಂಟು ಬಗ್ಗೆ ನಿಮಗೆ ಹೇಳಲೆ ಬೇಕಾಗಿಲ್ಲ. ನಮ್ಮ ನಿಪ್ಪಾಣಿ ಮಿಸಳ್-ಬ್ರೆಡ್ ಬಗ್ಗೆ ಮಾತ್ರ ನಿಮಗೆ ಉಲ್ಲೇಖಿಸಲೇಬೇಕು.

ಚಂದ್ರಶೇಖರ ಕಂಬಾರ, ಬಸವರಾಜ ಕಟ್ಟಿಮನಿ, ಏಣಗಿ ಬಾಳಪ್ಪ, ಕೃಷ್ಣಮೂರ್ತಿ ಪುರಾಣಿಕ, ಬೇಟಗೆರಿ ಕೃಷ್ಣಶರ್ಮ ಮುಂತಾದ ಅನೇಕರು ನಾಡಿನ ಕನ್ನಡ ಹಿರಿಮೆಯ ಸಾಂಸ್ಕೃತಿಕ ರಾಯಭಾರಿಗಳು ಕನ್ನಡ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಸಂಗೀತ ಲೋಕಕ್ಕೆ ಬೆಳಗಾವಿ ತವರೂರು. ಎರಡು ಭಾಷೆಗಳ ಕಲೆ ಮತ್ತು ಸಂಗೀತಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.

ರಾಜಕೀಯ: ರಾಜಕೀಯದ ವಿಷಯಕ್ಕೆ ಬಂದ್ರೆ, ಮೊದಲನೇ ರಾಜಧಾನಿ ಜಿಲ್ಲೆ ಹೇಗೆ ಪ್ರಭಾವಶಾಲಿಯೋ ಹಾಗೆನೇ ಎರಡನೇ ರಾಜಧಾನಿ ಜಿಲ್ಲೆ ಕೂಡ ರಾಜಕೀಯ ಪಕ್ಷದ ದಿಕ್ಕನ್ನೇ ಬದಲಿಸಬಲ್ಲಷ್ಟು ಪ್ರಭಾವಿ. ಬೆಂಗಳೂರು(28 ಶಾಸಕರು,12.5%) ಮತ್ತು ಬೆಳಗಾವಿ(18 ಶಾಸಕರು, 8.1%) ಎರಡೇ ಜಿಲ್ಲೆಗಳು ಕರ್ನಾಟಕದ ಶೇ.20ರಷ್ಟು ಶಾಸಕರನ್ನು ತಮ್ಮ ಪ್ರತಿನಿಧಿಗಳನ್ನಾಗಿ ಆರಿಸಿ ಕಳಿಸುತ್ತವೆ. ಬೆಳಗಾವಿ ನಗರ ಮತ್ತು ತಾಲ್ಲೂಕಿನ ಮೂರು ಮತ್ತು ಖಾನಾಪುರ ವಿಧಾನಸಭೆ ಕ್ಷೇತ್ರಗಳಲ್ಲಿ ಮಾತ್ರ ಎಮ್.ಇ.ಎಸ್ ಎಂಬ ಕತ್ತೆ ತನ್ನನ್ನು ತಾನು ಕುದುರೆ ಎಂದುಕೊಂಡು ಹೇಳಿ ರಾಜಕೀಯ ರೇಸ್-ನಲ್ಲಿ ಹುಚ್ಚಾಟ ಆಡುತ್ತದೆ. ಮುಗ್ಧ ಮರಾಠಿಗರು ಹಿಂದೆ ಈ ಕತ್ತೆಗೆ ಬಹಳ ಮಾರು ಹೋಗಿದ್ದರಾದರೂ ಈಗ ಆ ಭ್ರಮೆಯಿಂದ ಸ್ವಲ್ಪ ಮಟ್ಟಿಗೆ ಹೊರಬಂದಿದ್ದಾರೆ. ಆದರೂ ನಗರಪಾಲಿಕೆ, ಕೆಲವು ತಾ.ಪಂ ಮತ್ತು ಜಿ.ಪಂಗಳಲ್ಲಿ ಈ ಇವರ ನಡೆಯುತ್ತದೆ. ಬಹಳ ಜನ ಮರಾಠಿಗರು ಇಲ್ಲಿ ಶಾಂತಿ ಸಹಬಾಳ್ವೆಯಿಂದಲೇ ಇದ್ದಾರೆ. ನಿಪ್ಪಾಣಿಯಲ್ಲಿ ಮಾತ್ರ ಅದಕ್ಕೆ ಕ್ಯಾರೇ ಅನ್ನುವವರು ಇಲ್ಲ. ಬಾಕಿ ಎಲ್ಲ ಕಡೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ.

ಇನ್ನು ಜಾತಿ ಲೆಕ್ಕಾಚಾರವನ್ನು ಈ ಮೊದಲೇ ಹೇಳಿದ್ದೇನೆ. ಇದು ಲಿಂಗಾಯಿತ ಪ್ರಭಾವಿ ಜಿಲ್ಲೆಯಾದ್ರು ಜಾತ್ಯತೀತವಾಗಿ ನಡೆದುಕೊಂಡಿದೆ. ದಲಿತ ವರ್ಗಕ್ಕೂ ಕೂಡ ತನ್ನ ಹಕ್ಕು ಸಾಧಿಸಲು ಅವಕಾಶ ಕೊಟ್ಟಿದೆ. ದ.ಕದಲ್ಲಿ ಒಕ್ಕಲಿಗರನ್ನು ಗೌಡರು ಎಂದು ಸಂಬೋಧಿಸಿದಂತೆ ಇಲ್ಲಿ ಲಿಂಗಾಯಿತರನ್ನು ಗೌಡರು ಎನ್ನಲಾಗುತ್ತದೆ. ನಾನು 25 ವರ್ಷದವನಾದರು ನನ್ನನ್ನು ಈಗಲೂ ಸಣ್ಣ ಗೌಡರು ಅಂತಾನೆ ಕರಿತಾರೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳೇ ನಿರ್ಣಾಯಕ. ಜೆಡಿಎಸ್ ಕುದುರೆ ಅದರ ಸವಾರನ ಮೇಲೆ ಅವಲಂಬಿತವಾಗಿದೆ. ಲಿಂಗಾಯಿತರು ಬರೀ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ಆರೋಪವನ್ನು ಈ ಜಿಲ್ಲೆ ಸುಳ್ಳು ಎಂದು ತೋರಿಸಿದೆ


ಕೃಪೆ :thatskannada

ವಿಜಯ ಕರ್ನಾಟಕ ದಲ್ಲಿ


ಮಂಗಳವಾರ, ಮಾರ್ಚ್ 8, 2011

ಬೆಳಗಾವಿ ಜಿಲ್ಲೆ ಬಗ್ಗೆ ನಿಮಗೆಷ್ಟು ಗೊತ್ತು?

ಎರಡನೇ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವ ಶುಭ ಸಂದರ್ಭದಲ್ಲಿ ಹೆಮ್ಮೆಯ ಕನ್ನಡಿಗರಿಗೆಲ್ಲ ಹಾರ್ದಿಕ ಅಭಿನಂದನೆಗಳು. ಅನೇಕ ಅಡೆ-ತಡೆಗಳನ್ನು ಎದುರಿಸಿ ಅಂತು-ಇಂತು ಪ್ರಸವ ವೇದನೆಗಳೊಂದಿಗೆ ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಚಾಲನೆ ದೊರೆಯುತ್ತಿದೆ. ಕನ್ನಡದ ವಿಶ್ವ ಸಮ್ಮೇಳನ ನಡೆಸುವ, ಆತಿಥ್ಯವಹಿಸುವ ಸುಯೋಗ ಹೆಮ್ಮೆಯ ಕುಂದಾನಗರಿ ಬೆಳಗಾವಿಗೆ ಒಲಿದು ಬಂದಿದೆ.

ಬಹುತೇಕ ಕರ್ನಾಟಕ ಜನರ ಪಾಲಿಗೆ ಬರೀ ಬೆಲಗಾಮ್ ಅಥವಾ ಬೆಳಗಾಂ ಆಗಿರುವ(ಚಲನಚಿತ್ರ ಜಾಹೀರಾತುಗಳು ಒಂದು ಸಣ್ಣ ಉದಾಹರಣೆ) ಈ ಊರಿನ ನೈಜ ಹೆಸರು ಬೆಳಗಾವಿ (ನಾನು ಬೆಳಗಾಂವ ಎನ್ನುತ್ತೇನೆ. ಬಹುತೇಕ ಮರಾಠಿ ಜನ ಕೂಡ ಬೆಳಗಾಂವ ಎನ್ನುತ್ತಾರೆ) ಎಂದು ಗೊತ್ತೇ ಇಲ್ಲ. ಈ ಸಮ್ಮೇಳನದಲ್ಲಿ ನೆಪದಲ್ಲಿ ದಟ್ಸ್ ಕನ್ನಡದ ಶಾಮ್ ಸರ್ ನನಗೆ ಜಿಲ್ಲೆಯ ಸಮಗ್ರ ಪರಿಚಯವನ್ನು ಎಲ್ಲರಿಗೂ ಮಾಡಿಕೊಡಿ ಎಂದಾಗ ಬಹಳ ಸಂತೋಷದಿಂದಲೇ ಈ ಕಿರು ಕಾರ್ಯಕ್ಕೆ ಒಪ್ಪಿಕೊಂಡೆ.

ಬಳ್ಳಾರಿ ಅಂದ ತಕ್ಷಣ ಬಹುತೇಕರಿಗೆ ಬರೀ ಗಣಿ ಧೂಳು ಸೃತಿಪಟಲದಲ್ಲಿ ಮೂಡಿದ ಹಾಗೆ, ಬೆಳಗಾವಿ ಹೆಸರು ಕೇಳಿದಾಗ ಬರೀ ಗಡಿ ಗದ್ದಲ ಮನದಾಳದಲ್ಲಿ ಮೂಡಿ ಬರುತ್ತೆ. ಛೇ ಬೆಳಗಾಂನಲ್ಲಿ ಬರೀ ಮರಾಠಿನೇ ಮಾತಾಡ್ತಾರೇ ಅಂತೇ ಕಣ್ರೀ, ಕನ್ನಡ ಸತ್ತು ಹೋಗ್ತಾ ಇದೆ ಅಂತ್ರಿ ಅನ್ನೋ ಗೊಣಗಾಟವನ್ನು ನೀವು ಬಹಳ ಕಡೆ ಕೇಳಿ ಇರುತ್ತಿರಿ. ಇದೆಲ್ಲಾ ನಿಜಾನಾ? ಉತ್ತರ ಕರ್ನಾಟಕ ಅಂದ್ರೆ ಬರೀ ಬಯಲು ಸೀಮೆ, ಬಿಸಿಲು, ಹೆಚ್ಚಿನ ಮಟ್ಟಿಗೆ ಕೃಷಿ ನಿರುಪಯುಕ್ತ ಜಮೀನು, ಬರದ ಛಾಯೆ ಅಂದು ಕೊಂಡಿರುವವರಿಗೆ ಉತ್ತರ ಕರ್ನಾಟಕ ಭಾಗವೆಂದೆನಿಸಿಕೊಂಡಿರುವ ಬೆಳಗಾವಿನೂ ಹೀಗೆನಾ? ಬೆಳಗಾವಿಯ ಎಲ್ಲಾ ಮರಾಠಿ ಜನಾ ಭಾರೀ ಹುಂಬರಾ? ಇದಕ್ಕೆಲ್ಲ ಉತ್ತರ ಕೊಡುವ ಒಂದು ಸಣ್ಣ ಪ್ರಯತ್ನ ಬೆಳಗಾವಿ ಜಿಲ್ಲೆ ನಿಮಗೆಷ್ಟು ಗೊತ್ತು? ಎಂಬ ಲೇಖನದಲ್ಲಿ ಮಾಡಿದ್ದೇನೆ.

ಬೆಳಗಾವಿ ಕರ್ನಾಟಕದ ನಾಲ್ಕನೇ ದೊಡ್ಡ ನಗರ ಮತ್ತು ಮಹಾನಗರ ಪಾಲಿಕೆ. ಜನಸಂಖ್ಯೆಯಲ್ಲಿ ಎರಡನೇ ಅತೀ ದೊಡ್ಡ ಜಿಲ್ಲೆ ಮತ್ತು ವಿಸ್ತೀರ್ಣದಲ್ಲಿ ಅತೀ ದೊಡ್ಡ ಜಿಲ್ಲೆ. ಜಿಲ್ಲೆಯ ಒಂದು ಮೂಲೆಯವರಿಗೆ ಇನ್ನೊಂದು ಮೂಲೆಯ ಬಗ್ಗೆ ಗೊತ್ತಿರುವುದಿಲ್ಲ. ಯಾಕಂದ್ರೆ ಅವುಗಳ ನಡುವಿನ ಅಂತರ ಸರಿ ಸುಮಾರು 160 ಕಿ.ಮೀ. ಬೆಂಗಳೂರಿನಿಂದ NH4ರ ಹಾದಿಯಲ್ಲಿ ಹೊರಟರೆ ನೀವು ಇಷ್ಟೇ ಅಂತರದಲ್ಲಿ ನಾಲ್ಕು ಜಿಲ್ಲೆಗಳನ್ನು ಕ್ರಮಿಸುತ್ತಿರಿ ಮತ್ತು ಅದೆಷ್ಟೊ ವೈವಿಧ್ಯತೆಯನ್ನು ಕಾಣುತ್ತೀರಿ. ಹಾಗೆನೇ ಈ ಒಂದೇ ಜಿಲ್ಲೆಯಲ್ಲಿ ಭಾರೀ ವೈವಿಧ್ಯತೆಯನ್ನು ಕಾಣಬಹುದು. ಸಾಮಾನ್ಯವಾಗಿ ಯಾವುದೇ ಪ್ರದೇಶ ಅಥವಾ ಜಿಲ್ಲೆಯ ಬಗ್ಗೆ ವಿವರಣೆ ನೀಡುವಾಗ ಅದನ್ನು ಭೌಗೋಳಿಕ, ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕ ಮತ್ತು ಕೃಷಿ, ಉದ್ಯಮ ಎಂಬ ವಿಭಾಗಗಳಲ್ಲಿ ಆಯಾ ವಿವರಣೆ ಕೊಡಲಾಗುತ್ತದೆ. ಹಾಗೇ ನಾನು ಕೂಡ ಇಲ್ಲಿ ಅದನ್ನೆ ಮಾಡಿದ್ದೆನೆ.

ಭೌಗೋಳಿಕ ಮಾಹಿತಿ

ಉತ್ತರ ಕರ್ನಾಟಕ ಅಂದಾಕ್ಷಣ ಬಹುತೇಕರಿಗೆ ಬರೀ ಬಯಲು ಸೀಮೆ, ಬಿಸಿಲು ಎಂಬ ಭ್ರಮೆ ಇದೆ. ಆದರೆ ಉ.ಕ.ದ ಭಾಗವಾದರೂ ಬೆಳಗಾವಿ ಸಂಪೂರ್ಣವಾಗಿ ಬಯಲು ಸೀಮೆ ಅಲ್ಲ. ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳು ಸಮೃದ್ಧ ಕಾಡು ಮತ್ತು ಸಹ್ಯಾದ್ರಿ ಬೆಟ್ಟ ಸಾಲುಗಳನ್ನು ಹೊಂದಿದ್ದು ಮಲೆನಾಡಿನ ಅವಿಭಾಜ್ಯ ಅಂಗಗಳೇ ಆಗಿವೆ. ಸ್ವತಃ ಬೆಳಗಾವಿ ನಗರವೇ ಸಹ್ಯಾದ್ರಿ ಮಡಿಲಲ್ಲಿ ಹಾಯಾಗಿ ಪವಡಿಸಿದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಹದಿನೈದು-ಇಪ್ಪತ್ತು ಲಕ್ಷ ಜನಸಂಖ್ಯೆಗೆ ಒಂದು ಜಿಲ್ಲೆ ಇದ್ದರೆ ಈ ಒಂದೇ ಜಿಲ್ಲೆಯ ಜನಸಂಖ್ಯೆ ಭರ್ತಿ ಸರಿ ಸುಮಾರು ಐವತ್ತೈದು ಲಕ್ಷ. ಇದು ಬೆಳಗಾವಿ, ಚಿಕ್ಕೋಡಿ, ಹುಕ್ಕೇರಿ, ರಾಯಬಾಗ, ಅಥಣಿ, ಖಾನಾಪುರ, ಗೋಕಾಕ, ಬೈಲಹೊಂಗಲ, ಸವದತ್ತಿ, ರಾಯಬಾಗ ಎಂಬ ಹತ್ತು ತಾಲ್ಲೂಕುಗಳನ್ನು ಒಳಗೊಂಡಿದೆ. ಇದರಲ್ಲಿ ಖಾನಾಪುರ ತಾಲ್ಲುಕು ಸಂಪೂರ್ಣವಾಗಿ ಕಾಡಿನ, ಬೆಟ್ಟ ಗುಡ್ಡಗಳ ನಾಡು. ಬೆಳಗಾವಿ ತಾಲ್ಲೂಕು ಕೂಡ ಬಹುತೇಕ ಕಾಡಿನ ಪ್ರದೇಶ ಮತ್ತು ಸ್ವಲ್ಪ ಮಟ್ಟಿಗೆ ಅರೆ-ಮಲೆನಾಡು ಭಾಗವನ್ನು ಒಳಗೊಂಡಿದೆ. ಚಿಕ್ಕೋಡಿ, ಹುಕ್ಕೇರಿ, ಗೋಕಾಕ, ಬೈಲಹೊಂಗಲ ತಾಲ್ಲೂಕುಗಳು ಅರೆ ಮಲೆನಾಡು ಪ್ರದೇಶ ಹೊಂದಿದ್ದು ಸಹ್ಯಾದ್ರಿ ಸೆರಗಿನಲ್ಲೆ ಹಸಿರು ಹೊದ್ದಿಕೊಂಡಿವೆ.

ಸವದತ್ತಿ, ರಾಮದುರ್ಗ, ರಾಯಬಾಗ, ಅಥಣಿ ಅಂತಹ ಭಾರೀ ಬಯಲು ಸೀಮೆ ಪ್ರದೇಶಗಳೇನು ಅಲ್ಲ. ಅಲ್ಲಿಯೂ ಕೂಡ ಹಸಿರು ಮತ್ತು ಸ್ವಲ್ಪ ಮಟ್ಟಿಗೆ ಸಣ್ಣ ಗುಡ್ಡಗಳು ಇವೆ. ಖಾನಾಪುರದಲ್ಲಿ ಅನೇಕ ಚಾರಣ ಯೋಗ್ಯ ಸ್ಥಳಗಳಿವೆ. ಲೊಂಡಾದ ಬಳಿ ಇರುವ ದೂಧಸಾಗರ ಫಾಲ್ಸ್ ಅಂತೂ ನಯನ ಮನೋಹರ (ಇದು ಉ.ಕ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದಾದರೂ ಬೆಳಗಾವಿಗೆ ಹತ್ತಿರ). ಬೆಳಗಾವಿ ಹತ್ತಿರದಲ್ಲೇ ಅಂಬೋಲಿ, ತಿಲಾರಿ ಅಂತಹ ಅನೇಕ ಪ್ರವಾಸ ಯೋಗ್ಯ ಸ್ಥಳಗಳಿವೆ. ಆದ್ರು ಅವು ಮಹಾರಾಷ್ಟ್ರ ರಾಜ್ಯದ ವ್ಯಾಪ್ತಿಗೆ ಬರುತ್ತವೆ. ಇನ್ನು ಜಿಲ್ಲೆಯಲ್ಲಿ ಗೋಕಾಕ ಜಲಪಾತ, ಸೊಗಲ ಜಲಪಾತ, ಗೊಡಚನಮಲ್ಕಿ ಧಬಧಬಿ ಕಣ್ಮನ ಸೆಳೆಯುತ್ತವೆ. ಗೋಕಾಕ ಜಲಪಾತದ ಮೇಲೆ ಇರುವ ತೂಗು ಸೇತುವೆಯಂತೂ ಮೈನವಿರೇಣಿಸುವ ಅನುಭವ ನೀಡುತ್ತದೆ. ಇದೇ ಗೋಕಾಕ ತಾಲ್ಲೂಕಿನಲ್ಲಿ ರಂಗನತಿಟ್ಟು ಪಕ್ಷಿಧಾಮದ ತರಹವೇ ದೂಪಧಾಳ ಪಕ್ಷಿಧಾಮ ಅನೇಕ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ.

ಜಿಲ್ಲೆಯಲ್ಲಿ ಯಾವುದೇ ಭಾರೀ ನೀರಾವರಿ ಯೋಜನೆಗಳು ಇರದಿದ್ದರೂ ಕೃಷ್ಣ, ಘಟಪ್ರಭ, ಮಲಪ್ರಭ, ವೇದಗಂಗ, ದೂಧಗಂಗ, ಮಾರ್ಕಂಡೆಯ, ಹಿರಣ್ಯಕೇಷಿ ನದಿಗಳು ಹರಿದು ನೀರಿನ ಕೊರತೆಯನ್ನು ಬಹುತೇಕ ಮಟ್ಟಿಗೆ ನೀಗಿಸುತ್ತವೆ. ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳು ಉತ್ತಮ ಮಳೆಯನ್ನು ಕಾಣುತ್ತವೆ. ಬಯಲು ಸೀಮೆಯಲ್ಲೂ ಕೂಡ ಅಗತ್ಯಕ್ಕೆ ತಕ್ಕ ಮಳೆ ಆಗುವುದರಿಂದ ಬರದ ಸಮಸ್ಯೆ ಇಲ್ಲ. ಬೆಳಗಾವಿಯಲ್ಲಿ ಅಂತೂ ಮಳೆಗಾಲದಲ್ಲಿ ಛತ್ರಿ ಇಲ್ಲದೆ ನಾಲ್ಕು ತಿಂಗಳು ಕಳೆಯಲು ಸಾಧ್ಯವೇ ಇಲ್ಲ. ಇನ್ನು ಬಿಸಿಲಿನ ಬಗ್ಗೆ ಹೇಳುವುದಾದರೆ ಇಲ್ಲಿ ಉಷ್ಣಾಂಶ ಮಲೆನಾಡು ಮತ್ತು ಅರೆ ಮಲೆನಾಡು ಭಾಗದಲ್ಲಿ 30-35 ಡಿ.ಸೆ ಮತ್ತು ಬಯಲು ಸೀಮೆಯಲ್ಲಿ 32-38 ಡಿ.ಸೆ ಇರುತ್ತದೆ. ಇನ್ನು ಉಳಿದದ್ದು ಚಳಿಗಾಲ? ಅಬ್ಬಾ ನೆನಪಿಸಿಕೊಂಡರೆ ಮೈ ಜುಂ ಅನ್ನುತ್ತದೆ. ಬೆಳಿಗ್ಗೆ ಎಂಟು ಘಂಟೆಯವರಗೆ ಮಂಜು ಮುಸುಕಿ ಮನೆಯಲ್ಲಿ ಬೆಚ್ಚಗೆ ಬಿದ್ದುಕೊಳ್ಳಿ ಅನ್ನೊ ಹಾಗೆ ಇರ್ತ್ತದೆ.

ಘಟಪ್ರಭೆಗೆ ಹುಕ್ಕೆರಿ ತಾಲ್ಲೂಕಿನ ಹಿಡ್ಕಲ್ ಬಳಿ ಕಟ್ಟಿರುವ ಜಲಾಶಯ ಮತ್ತು ಮಲಪ್ರಭೆಗೆ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿ ಕಟ್ಟಿರುವ ಜಲಾಶಯ ಜಿಲ್ಲೆಯ ಪ್ರಮುಖ ಜಲಾಶಯಗಳು. ಎರಡು ಗುಡ್ಡಗಳ ನಡುವೆ ನವಿಲುತೀರ್ಥ ಜಲಾಶಯ ಕಟ್ಟಲಾಗಿದ್ದು ಸವದತ್ತಿ ರೇಣುಕಾ ಯಲ್ಲಮ್ಮ ತಾಯಿಗೆ ಕಳಶಪ್ರಾಯವಾಗಿದೆ. ಬೆಳಗಾವಿಯ ಮಿಲಿಟರಿ ಪ್ರದೇಶ ಹಚ್ಚ ಹಸುರಿನಿಂದ ಕೂಡಿದೆ. ಬೆಂಗಳೂರಿನ ಹಾಗೇ ಬೆಳಗಾವಿ ಉದ್ಯಾನ ನಗರಿ ಅಲ್ಲದಿದ್ದರೂ ಅಂಥಹದೇ ತಂಪಾದ ವಾತಾವರಣವನ್ನು ಹೊಂದಿದೆ. ತನಗೆ ಎರಡನೇ ರಾಜಧಾನಿಯಾಗುವ ಅರ್ಹತೆಯನ್ನು ಸಾರಿ ಹೇಳುತ್ತದೆ.

(ಮುಂದಿನ ಭಾಗದಲ್ಲಿ ಸಾಂಸ್ಕೃತಿಕವಾಗಿ ಬೆಳಗಾವಿ ಎಷ್ಟು ಸಮೃದ್ಧವಾಗಿದೆ ಮತ್ತು ರಾಜಕೀಯವಾಗಿ ಎಷ್ಟು ಶಕ್ತಿಶಾಲಿಯಾಗಿದೆ ಎಂಬ ಬಗ್ಗೆ ಮಾಹಿತಿ ದೊರೆಯಲಿದೆ. ನಿರೀಕ್ಷಿಸಿ.)
English summary
All about Belgaum. Facts and overall information about Belgaum district by Mahesh Gajabar. One part of Belgaum has western ghat. Thick forest, good trekking spots, number of water falls has made Belgaum one of the favourite spots.
ಕೃಪೆ :thatskannada

ಯಾರ್ರೀ ಬೆಳಗಾವಿ, ರೈಟ್ ರೈಟ್ ! ಕನ್ನಡಿಗರಿಗೆ ವಿಶೇಷ ಪ್ರಯಾಣ

ಬೆಂಗಳೂರು, ಮಾ. 8: ಬೆಳಗಾವಿಯಲ್ಲಿ ಮಾರ್ಚ್ 11ರಿಂದ ಜರುಗಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವವರಿಗಾಗಿ ವಿಶೇಷ ಬಸ್, ವಿಮಾನ ಮತ್ತು ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಸಮ್ಮೇಳನದ ವಿಶೇಷಾಧಿಕಾರಿ ಐ ಎಂ ವಿಠ್ಠಲಮೂರ್ತಿ ತಿಳಿಸಿದ್ದಾರೆ. ವಿಶೇಷ ವಿಮಾನವು ಮಾರ್ಚ್ 11ರಂದು ಬೆಳಗ್ಗೆ 10.40ಕ್ಕೆ ಬೆಂಗಳೂರಿನಿಂದ ಹೊರಟು ಮಧ್ನಾಹ್ನ 12.10ಕ್ಕೆ ಬೆಳಗಾವಿ ತಲುಪಲಿದೆ. ಮಾರ್ಚ್ 13ರಂದು ರಾತ್ರಿ 8.50ಕ್ಕೆ ಬೆಳಗಾವಿಯಿಂದ ಹೊರಟು ರಾತ್ರಿ 10.30ಕ್ಕೆ ಬೆಂಗಳೂರು ಸೇರಲಿದೆ.

ವಿಶೇಷ ರೈಲು ಮಾರ್ಚ್ 10ರಂದು ರಾತ್ರಿ 8 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ಮಾರ್ಚ್ 11ರಂದು ಬೆಳಗ್ಗೆ 8 ಗಂಟೆಗೆ ಬೆಳಗಾವಿ ತಲುಪಲಿದೆ. ಮಾರ್ಚ್ 13ರಂದು ರಾತ್ರಿ 9.30ಕ್ಕೆ ಬೆಳಗಾವಿ ಬಿಡಲಿರುವ ರೈಲು 14ರ ಬೆಳಗ್ಗೆ ಬೆಂಗಳೂರು ಸೇರಲಿದೆ. ಎರಡನೇ ಶ್ರೇಣಿಯ, ಮೂರನೇ ಶ್ರೇಣಿಯ ಬೋಗಿಗಳು ಮತ್ತು ಸಾಮಾನ್ಯ ದರ್ಜೆ ಬೋಗಿಗಳು ಸೇರಿದಂತೆ 18 ಬೋಗಿಗಳನ್ನು ಈ ವಿಶೇಷ ರೈಲು ಒಳಗೊಂಡಿರುತ್ತದೆ. 

ಶೇ. 30 ರಿಯಾಯಿತಿ: ವಿಶೇಷ ಹವಾನಿಯಂತ್ರಿತ ರೈಲಿನಲ್ಲಿ ಪ್ರಯಾಣಿಸುವ ವಿಶ್ವ ಕನ್ನಡ ಸಮ್ಮೇಳನದ ನೋಂದಾಯಿತ ಪ್ರತಿನಿಧಿಗಳಿಗೆ ರಾಜ್ಯ ಸರಕಾರ ರೈಲಿನ ಎಲ್ಲ ದರ್ಜೆಯ ಪ್ರಯಾಣ ದರದಲ್ಲಿ ಶೇ. 30ರಷ್ಟು ರಿಯಾಯಿತಿ ಪ್ರಕಟಿಸಿದೆ. ಟಿಕೆಟ್ ಗಳನ್ನು ಬೆಂಗಳೂರಿನ ಕಾರ್ಪೊರೇಶನ್ ವೃತ್ತದಲ್ಲಿರುವ ಬಾದಾಮಿ ಹೌಸ್ ನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕಚೇರಿಯಲ್ಲಿ ಕಾಯ್ದಿರಿಸಬಹುದು. ದೂರವಾಣಿ: 080- 4334 4334/ 4346 4346.
English summary
The Karnataka Government has arranged Special Transportation Facilities to Belgaum on the occation of Kannada Convention to be held on March 11. Transporation includes Air, Rail and Bus Facilities said OSD I.M. Vittala Murthy in Banglore On March 7th.

ವಿಶ್ವ ಕನ್ನಡ ಸಮ್ಮೇಳನ ಹಾಗೂ ಕನ್ನಡಿಗರ ಏಳಿಗೆ

ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ಇನ್ನೇನು ಶುರುವಾಗಲಿದೆ. ಇದನ್ನು ಯಾರು ಉದ್ಘಾಟನೆ ಮಾಡಬೇಕು ಅನ್ನೋ ವಿಷಯದಲ್ಲೇ ಕರ್ನಾಟಕದ ಜನರು ಕಳೆದು ಹೋಗಿದ್ದಾರೇನೋ ಅನ್ನಿಸುವಂತೆ ಚರ್ಚೆಗಳು ನಡೀತಾ ಇವೆ. ಇದೇ ಸಂದರ್ಭದಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು ಒಂದು ಜಾಹೀರಾತನ್ನು ಹೊರಡಿಸಿದೆ.

ಈ ಜಾಹೀರಾತಲ್ಲಿ ವಿಶ್ವ ಕನ್ನಡ ಸಮ್ಮೇಳನ ಯಾಕೆ? ಏನು? ಅಂತನ್ನೋದರ ಬಗ್ಗೆ ನಮ್ಮ ಸರ್ಕಾರ ಏನಂದುಕೊಂಡಿದೆ ಅನ್ನೋದು ಕಾಣುತ್ತೆ. ಏಕೀಕರಣವಾಗಿ ಕರ್ನಾಟಕ ಐವತ್ತು ವರ್ಷ ಆಯ್ತು. ಈ 50 ವರ್ಷಗಳಲ್ಲಿ ಕರ್ನಾಟಕದ ಸಂಸ್ಕೃತಿ ಮತ್ತಷ್ಟು ಪ್ರಜ್ವಲಿಸಿದೆಯಂತೆ. ಇದೀಗ ಕನ್ನಡ ಶಾಸ್ತ್ರೀಯ ಭಾಷೆಯಾಗಿದೆಯಂತೆ(!). ಇದಕ್ಕೆಲ್ಲಾ ಕಾರಣ ಕನ್ನಡದ ಹಿರಿಯ ಪರಂಪರೆ ಮತ್ತು ಸಾಂಸ್ಕೃತಿಕ ಗರಿಮೆಯಂತೆ. ಇಂತಹ ಗರಿಮೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಸಲುವಾಗಿಯೂ, ಕನ್ನಡತನದ ಮೇರುಸ್ಥಿತಿಗೆ ಕಾರಣವಾದವರನ್ನು ಗೌರವಿಸುವ ಸಲುವಾಗಿಯೂ, ನಮ್ಮ ನಿನ್ನೆಯ ಹಾದಿಯನ್ನು ನೆನೆದು ಮುಂದಿನ ಹಾದಿಯನ್ನು ನಿಚ್ಚಳಗೊಳಿಸುವ ಸಲುವಾಗಿಯೂ ಈ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಲಾಗುತ್ತಿದೆಯೆಂದು ರಾಜ್ಯ ಸರ್ಕಾರ ಹೇಳಿಕೊಳ್ಳುತ್ತಿದೆ.

ವಿಶ್ವ ಕನ್ನಡ ಸಮ್ಮೇಳನವೆಂದರೆ...

ಒಂದು ನಾಡಿನ ಜನರ ಕಲಿಕೆ, ದುಡಿಮೆಗಳು ಆ ನಾಡಿನ ಏಳಿಗೆಗೆ ಸಾಧನಗಳಾಗುತ್ತವೆ ಎಂಬುದು ಜಗತ್ತು ಕಂಡುಕೊಂಡಿರುವ ಸತ್ಯ. ನಾಡಿನ ಜನರ ನಡುವೆ ಇರುವ ಸಹಕಾರದ ಒಗ್ಗಟ್ಟು, ಸಾಧಿಸಬೇಕೆಂಬ ಛಲಗಳೂ ಕೂಡಾ ನಾಡಿನ ಏಳಿಗೆಯ ದಿಕ್ಕಿನೆಡೆ ಒಯ್ಯುವ ಪ್ರಮುಖವಾದ ಸಾಧನಗಳಾಗಿವೆ. ಅಂದರೆ ಈ ನಾಲ್ಕು ವಿಷಯಗಳೇ ಯಾವುದೇ ನಾಡಿನ ಏಳಿಗೆಗೆ ಆಧಾರಸ್ತಂಭಗಳಾಗಿವೆ ಎಂದರೆ ತಪ್ಪಾಗಲಾರದು. ಈ ನಾಲ್ಕೂ ಆಧಾರ ಸ್ತಂಭಗಳಲ್ಲಿ ಹಾಸುಹೊಕ್ಕಾಗಿರುವುದು ಆ ನಾಡಜನರ ತಾಯ್ನುಡಿ. ಅಂದರೆ ಪ್ರತಿಯೊಂದು ಸಮಾಜದ ಏಳಿಗೆಯಲ್ಲೂ ಆ ಸಮಾಜದ ತಾಯ್ನುಡಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದಲೇ ಕನ್ನಡ ಎನ್ನುವುದು ನಮಗೆ ಮಹತ್ವದ್ದಾಗಿದೆ. ಈ ಕಾರಣದಿಂದಲೇ ವಿಶ್ವ ಕನ್ನಡ ಸಮ್ಮೇಳನವೆನ್ನುವುದು ಈ ನಾಲ್ಕೂ ಕಂಬಗಳನ್ನು ಬಲಪಡಿಸುವ ಸಾಧನವಾಗಬೇಕಾಗಿದೆ.

ಕನ್ನಡಿಗರಲ್ಲಿ ಒಗ್ಗಟ್ಟು...

ವಿಶ್ವ ಕನ್ನಡ ಸಮ್ಮೇಳನ ಅಂದಾಕ್ಷಣ ಅದು ಕನ್ನಡ ನುಡಿಹಬ್ಬವೆಂದಾಗಲೀ, ಸಾಹಿತ್ಯ ಸಮ್ಮೇಳನದಂತೆ ಎಂದಾಗಲೀ, ಕನ್ನಡಿಗರ ಇತಿಹಾಸ, ಸಂಸ್ಕೃತಿ, ಹಿರಿಮೆಗಳ ವಸ್ತುಪ್ರದರ್ಶನವಾಗಲೀ ಮಾತ್ರವಲ್ಲ. ವಿಶ್ವ ಕನ್ನಡ ಸಮ್ಮೇಳನವೆಂಬುದು ಸರಿಯಾಗಿ ಬಳಸಿಕೊಂಡರೆ ಕನ್ನಡಿಗರಲ್ಲಿ ಒಗ್ಗಟ್ಟು ಮೂಡಿಸುವ ಒಂದು ಅತ್ಯುತ್ತಮ ಸಾಧನ ಆಗಲಿದೆ. ಇಂತಹ ಸಮ್ಮೇಳನವನ್ನು ಕರ್ನಾಟಕದ ಜನರ ಪ್ರತಿನಿಧಿಯಾದ ನಮ್ಮ ರಾಜ್ಯ ಸರ್ಕಾರವೇ ನಡೆಸುತ್ತಿರುವುದು ಅತ್ಯಂತ ಸರಿಯಾದುದಾಗಿದೆ. ಇದು ನಾಲ್ಕು ಕಂಬಗಳಲ್ಲಿ ಒಗ್ಗಟ್ಟೆಂಬ ಕಂಬವನ್ನು ಬಲಪಡಿಸುವ ಕಡೆಗೊಂದು ಹೆಜ್ಜೆಯನ್ನು ಇಟ್ಟಂತಾಗಿದೆ ಎನ್ನಬಹುದು. ಇನ್ನು ಉಳಿದ ಮೂರು ಕಂಬಗಳನ್ನು ಬಲಪಡಿಸುವುದು… ಈ ಸಮ್ಮೇಳನವನ್ನು ಹೇಗೆ ನಡೆಸುತ್ತಾರೆ? ಏನೇನು ಕಾರ್ಯಕ್ರಮ ಮಾಡುತ್ತಾರೆ? ಯಾವ ಸಂದೇಶ ಕೊಡುತ್ತಾರೆ? ಯಾವ ತೆರನಾದ ಚಿಂತನೆ ಅಲ್ಲಿ ನಡೆಸುತ್ತಾರೆ? ಅಸಲಿಗೆ ಅಲ್ಲಿ ಚಿಂತನೆಯನ್ನು ನಡೆಸುತ್ತಾರಾ? ಎಂಬುದರ ಮೇಲೆ ಅವಲಂಬಿಸಿದೆ.

ಕನ್ನಡಿಗರ ಕಲಿಕೆ...

ಪ್ರಪಂಚದಲ್ಲಿ ಮುಂದುವರೆದಿರೋ ದೇಶಗಳಲ್ಲೆಲ್ಲಾ ಕಲಿಕೆ ತಾಯ್ನುಡಿಯಲ್ಲೇ ಆಗುತ್ತಿರುವುದನ್ನು ನಾವು ಇಂಗ್ಲೇಂಡ್, ಜಪಾನ್, ಇಸ್ರೇಲ್, ಜರ್ಮನಿ, ಫ್ರಾನ್ಸ್ ಮೊದಲಾದ ದೇಶಗಳನ್ನು ನೋಡುವ ಮೂಲಕವೂ, ವಿಜ್ಞಾನಿಗಳ ಅಧ್ಯಯನ ಹಾಗೂ ಮಾತುಗಳನ್ನು ನಂಬುವ ಮೂಲಕವೂ ಅರಿಯಬಹುದಾಗಿದೆ. ಹಾಗಾಗಿ ಕನ್ನಡಿಗರು ಏಳಿಗೆ ಹೊಂದಲು, ಜಗತ್ತಿನಲ್ಲಿ ಅತ್ಯುತ್ತಮವಾದುದನ್ನು ಸಾಧಿಸಲು ಕನ್ನಡದಲ್ಲಿಯೇ ಕಲಿಕೆ ಮಾಡಬೇಕಾಗಿದೆ. ಹಾಗೆಂದಾಕ್ಷಣ, ನಾಳೆಯಿಂದ ಕರ್ನಾಟಕದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುತ್ತೇವೆ ಎನ್ನುವುದು ದುಡುಕಿನ ಮಾತಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ನಮ್ಮ ಮಕ್ಕಳ ಅರಿವು, ಕಲಿಕೆಯ ಮಟ್ಟ ಹೆಚ್ಚಿ ಜಗತ್ತಿನ ಅತ್ಯುತ್ತಮ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬಂತಹ ವಾತಾವರಣವನ್ನು ಹುಟ್ಟುಹಾಕಬೇಕಾಗಿದೆ.

ಹಾಗಾಗಬೇಕೆಂದರೆ ಮೊದಲನೆಯದಾಗಿ ಇಂದು ನಾವು ಕಲಿಕೆಯಲ್ಲಿ ಬಳಸುತ್ತಿರುವುದು ಸರಿಯಾದ ಕನ್ನಡವೇ? ಈಗಿನ ನಮ್ಮ ನುಡಿಯು ಎಲ್ಲಾ ಕ್ಷೇತ್ರಗಳಲ್ಲೂ ಬಳಕೆಯಾಗಬಲ್ಲ ಸಾಮರ್ಥ್ಯ ಹೊಂದಿದೆಯೇ? ಅಂತಹ ಕ್ಷೇತ್ರಗಳಾವುವು? ಅಂತಹ ಸಾಮರ್ಥ್ಯ ಗಳಿಸಿಕೊಳ್ಳುವುದು ಹೇಗೆ? ಕನ್ನಡದ ವ್ಯಾಕರಣ ಎಂಥದು? ಕನ್ನಡದಲ್ಲಿ ಪದಗಳನ್ನು ಹುಟ್ಟುಹಾಕುವುದು ಹೇಗೆ? ಹಾಗೆ ಹುಟ್ಟು ಹಾಕಲಾಗುವ ಪದಗಳನ್ನು ಕಲಿಕೆಯಲ್ಲಿ ತರುವುದು ಹೇಗೆ? ಇತ್ಯಾದಿಗಳ ಚಿಂತನೆಗೆ ಹಚ್ಚಬಲ್ಲಂತಹ ಕನ್ನಡ ನುಡಿಯ ವೈಜ್ಞಾನಿಕವಾದ ಅಧ್ಯಯನವಾಗಬೇಕಾಗಿದೆ. ನಾಡಿನ ಈಗಿನ ಕಲಿಕಾ ಪದ್ದತಿಯಲ್ಲಿ ಸುಧಾರಣೆ ತರುವ ಜೊತೆಜೊತೆಯಲ್ಲೇ, ಎಲ್ಲಾ ಹಂತದ ಕಲಿಕೆಯನ್ನೂ ಕನ್ನಡಕ್ಕೆ ತರುವ ಬಗ್ಗೆ ಚಿಂತನೆ ನಡೆಯಬೇಕಾಗಿದೆ. ಕನ್ನಡ ಶಾಲೆಗಳ ಗುಣಮಟ್ಟದ ಜೊತೆಯಲ್ಲೇ ಕಲಿಕಾ ಪದ್ಧತಿಯ, ಕಲಿಯುವ ವಿಷಯಗಳ ಗುಣಮಟ್ಟವನ್ನೂ ಹೆಚ್ಚಿಸುವುದು ಹೇಗೆ? ಎಂಬುದಕ್ಕೆ ಪ್ರಪಂಚದ ಬೇರೆ ಬೇರೆ ಯಶಸ್ವಿ ಸಮಾಜಗಳ ಪದ್ಧತಿಯನ್ನು ಅಧ್ಯಯನ ಮಾಡಬೇಕಾಗಿದೆ, ಅಲ್ಲಿನ ಒಳಿತನ್ನು ಅಳವಡಿಸಿ ನಮ್ಮ ನಾಡಿಗೆ ಹೊಂದಿಕೆಯಾಗುವ ಕಲಿಕಾ ವ್ಯವಸ್ಥೆಯನ್ನು ಕಟ್ಟಬೇಕಾಗಿದೆ. ಇದಾಗದ ಹೊರತು ವಿಶ್ವಮಟ್ಟದಲ್ಲಿ ಸಾಧನೆ ಮಾಡಬಲ್ಲ ಕನ್ನಡಿಗರ ಸಂಖ್ಯೆ ಹೆಚ್ಚುವುದು ಬಲು ಕಷ್ಟದ್ದಾಗಿದೆ.

ಕನ್ನಡಿಗರ ದುಡಿಮೆ...

ಕಲಿಕೆಯ ತಳಪಾಯವನ್ನು ಸರಿಪಡಿಸುವುದು ದುಡಿಮೆಯನ್ನು ಹೆಚ್ಚಿಸುವ ಒಂದು ಸಾಧನವಾಗಿದೆ. ಇದರ ಜೊತೆಗೆ ಸರ್ಕಾರ ತಾನು ಹೊಂದಿರುವ ಹಲವಾರು ನೀತಿಗಳನ್ನು ಮರು ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಜನರಲ್ಲಿ ದುಡಿಯಬೇಕೆನ್ನುವ ಸಂಸ್ಕೃತಿಯನ್ನೇ ಕೊಂದುಹಾಕುವ ಯೋಜನೆಗಳನ್ನು ಕೈಬಿಡಬೇಕಾಗಿದೆ. ಸಬ್ಸಿಡಿಯೆನ್ನುವುದು ದುಡಿಮೆಗೆ ಉತ್ತೇಜಿಸುತ್ತಿದೆಯೋ ಅಥವಾ ಜನರನ್ನು ಸೋಮಾರಿಗಳಾಗಿ ಮಾಡುತ್ತಿದೆಯೋ ಎಂಬುದನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಸರ್ಕಾರದ ಯೋಜನೆಗಳಿಂದಾಗಿ ಪ್ರತಿಯೊಂದನ್ನು ಸರ್ಕಾರವೇ ಪುಗಸಟ್ಟೆ ಕೊಡಲಿ ಎಂಬ ಮನಸ್ಥಿತಿಯನ್ನು ನಮ್ಮ ಜನರಲ್ಲಿ ಹುಟ್ಟು ಹಾಕದಂತೆ ಎಚ್ಚರ ವಹಿಸಬೇಕಾಗಿದೆ.

ಚೆನ್ನಾಗಿ ದುಡಿದರೆ ಚೆನ್ನಾಗಿ ಸಂಪಾದಿಸಬಹುದು ಎನ್ನುವುದನ್ನು ಜನಕ್ಕೆ ಮನವರಿಕೆ ಮಾಡಿಕೊಡುವಂತಹ ವ್ಯವಸ್ಥೆ ರೂಪಿಸುವಂತಹ ನೀತಿ ನಮ್ಮ ಸರ್ಕಾರದ್ದಾಗಬೇಕಾಗಿದೆ. ವೃತ್ತಿ ಕೌಶಲ್ಯ ಹೆಚ್ಚಿಸುವ, ದುಡಿಮೆಯನ್ನು ಉತ್ತೇಜಿಸುವ, ಉದ್ಯಮಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿ, ಮಾರ್ಗದರ್ಶನ ಹಾಗೂ ಸಹಕಾರವನ್ನು ನೀಡುವಂತಹ ನೀತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಯಾವ ಕ್ಷೇತ್ರದಲ್ಲಿ ಇಂದು ಕನ್ನಡಿಗರು ಹಿಂದುಳಿದಿದ್ದಾರೋ ಅಂಥಾ ಕ್ಷೇತ್ರಗಳನ್ನು ಗುರುತಿಸಿ, ಹೊರನಾಡಿನ ಪರಿಣಿತರ ಸಹಾಯ/ ಸೇವೆ ಪಡೆದು ಅಂತಹ ಕ್ಷೇತ್ರಗಳಲ್ಲಿ ಮುಂದುವರೆಯಲು ಅಗತ್ಯವಿರುವ ವಾತಾವರಣ/ ವ್ಯವಸ್ಥೆಯನ್ನು ಕಟ್ಟಬೇಕಾಗುತ್ತದೆ. ಕನ್ನಡಿಗರು ಪ್ರಪಂಚದ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ, ಇಡೀ ವಿಶ್ವಕ್ಕೇ ಅವನ್ನು ಮಾರಬಲ್ಲಂತಹ ಕ್ಷಮತೆ, ಯೋಗ್ಯತೆಗಳನ್ನು ಗಳಿಸಿಕೊಳ್ಳುವುದು ಹೇಗೆಂಬ ಬಗ್ಗೆ ಯೋಚಿಸಿ, ತಕ್ಕಂಥಾ ಯೋಜನೆಗಳನ್ನು ರೂಪಿಸಬೇಕಾಗಿದೆ.

ಕನ್ನಡಿಗರಲ್ಲಿ ಸಾಧಿಸುವ ಛಲ...

ಸಾಧಕರನ್ನು ಕಂಡು ಇಂತಹ ಸಾಧನೆಗಳನ್ನು ನಾವೂ ಮಾಡಬೇಕು ಎನ್ನುವ ಛಲವನ್ನು ಪ್ರತಿಯೊಂದು ಕನ್ನಡದ ಮನಸ್ಸಿನಲ್ಲಿ ಹುಟ್ಟುಹಾಕಲು ಏನು ಮಾಡಬೇಕು? ಈ ವಿಷಯವಾಗಿ ನಮ್ಮ ಇತಿಹಾಸದಿಂದ ಹೇಗೆ ಪ್ರೇರಣೆ ಪಡೆಯಬೇಕು? ನಮ್ಮ ಹಿ ವರ ಸೋಲುಗಳಿಂದ ಏನು ಕಲಿಯಬೇಕು? ಇಂದಿನ ನಮ್ಮ ಸಾಧಕರ ಅನುಭವದ ಲಾಭ ಮುಂದಿನ ಜನಾಂಗಕ್ಕೆ ತಲುಪಿಸುವ ಬಗೆ ಎಂತು? ನಮಗೂ ಗೆಲ್ಲುವ ಯೋಗ್ಯತೆಯಿದೆ, ಜಗತ್ತಿನ ಯಾವ ಮುಂದುವರೆದ ನಾಡಿಗೂ ನಾವು ಕಡಿಮೆಯಿರಬಾರದು ಎನ್ನುವ ಛಲ ಹುಟ್ಟು ಹಾಕುವುದು ಹೇಗೆ? ಎಂಬುದರ ಬಗ್ಗೆ ಚಿಂತನೆ ಯೋಜನೆಯಾಗಬೇಕಾಗಿದೆ.

ವ್ಯರ್ಥವಾಗದಿರಲಿ ವಿಶ್ವ ಕನ್ನಡ ಸಮ್ಮೇಳನ

ಹೌದೂ, ವಿಶ್ವ ಕನ್ನಡ ಸಮ್ಮೇಳನವೆನ್ನುವುದು ಕನ್ನಡಿಗರ ನಿನ್ನೆಗಳ ಬಗ್ಗೆ ಗಮನ ಹರಿಸುವುದಕ್ಕಿಂತಲೂ ಹೆಚ್ಚಾಗಿ ನಾಳೆಗಳನ್ನು ಹಸನುಗೊಳಿಸುವ ಬಗ್ಗೆ ಚಿಂತನೆಗೆ ಹಚ್ಚುವಂತಾಗಲಿ. ಕನ್ನಡಿಗರು ವಿಶ್ವದ ಮುಂದುವರೆದ ನಾಡುಗಳ ಸಮಸಮನಾಗಿ ನಿಲ್ಲುವಂತಾಗಲು ಬೇಕಿರುವ ವಿಷಯಗಳ ಬಗ್ಗೆ ಚರ್ಚೆ ನಡೆಸುವಂತಾಗಲೀ. ಸಮ್ಮೇಳನದಲ್ಲಿ ತೋರಿಸುವ ಇತಿಹಾಸ, ಸಂಸ್ಕೃತಿಗಳು ನಮ್ಮ ಮೈಮನಗಳಲ್ಲಿ ಹೆಮ್ಮೆ, ಸ್ಪೂರ್ತಿಗಳನ್ನು ಹುಟ್ಟುಹಾಕಲಿ. ಸಾಧಕರ ಮಾತುಗಳು ಮತ್ತಷ್ಟು ಸಾಧಕರನ್ನು ಹುಟ್ಟುಹಾಕುವಂತಿರಲಿ. ಕರ್ನಾಟಕ ರಾಜ್ಯ ಸರ್ಕಾರ ಬೊಕ್ಕಸದಿಂದ ವೆಚ್ಚ ಮಾಡುತ್ತಿರುವ ಪ್ರತಿಯೊಂದು ಪೈಸೆಯೂ ನಾಡಿನ ನಾಳಿನ ಏಳಿಗೆಗೆ ಹೂಡಿದ ಬಂಡವಾಳವಾಗಲಿ. ಕನ್ನಡಿಗರ ಸಂಸ್ಕೃತಿಯೆಂಬುದು 'ಇತಿಹಾಸದ ಸವಿಯ ಮೆಲುಕು ಹಾಕುವಿಕೆ' ಮಾತ್ರವಾಗದಿರಲಿ. ಇಡೀ ಸಮ್ಮೇಳನದ ಕಾರ್ಯಕ್ರಮಗಳು ವ್ಯರ್ಥವಾದ ವೈಭವೀಕರಣವಾಗಿರದೆ ಅರ್ಥಪೂರ್ಣವಾಗಿರಲಿ. ವಾಸ್ತವವಾಗಿ ನಾವಿರುವ ಹಂತ, ಸಾಗಬೇಕಾದ ದಾರಿ, ಎದುರಿಸಬೇಕಾದ ಎಡರು ತೊಡರುಗಳು, ಅವನ್ನು ದಾಟಿದ ನಂತರ ದಕ್ಕಿಸಿಕೊಳ್ಳುವ ಭವ್ಯವಾದ ನಾಳೆಗಳತ್ತ ಕನ್ನಡಿಗರನ್ನು ಕೊಂಡೊಯ್ಯುವಂತಿರಲಿ. 

ಭಾನುವಾರ, ಮಾರ್ಚ್ 6, 2011

ಮುಖ್ಯಮಂತ್ರಿಗಳ ಕರೆಯೋಲೆ

ಬೆಳಗಾವಿ ನಗರದಲ್ಲಿ ಮಾರ್ಚ್ 11ರಿಂದ 13ರವರೆಗೆ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಮೈಸೂರು ನಗರದಲ್ಲಿ 1985ರಲ್ಲಿ ನಡೆದ ಪ್ರಪ್ರಥಮ ವಿಶ್ವ ಕನ್ನಡ ಸಮ್ಮೇಳನದ ನಂತರ ನಡೆಯುತ್ತಿರುವ ದ್ವಿತೀಯ ವಿಶ್ವ ಕನ್ನಡ ಸಮ್ಮೇಳನ ಇದಾಗಿದೆ. ಸಕಲ ಕನ್ನಡಿಗರ ಆಶಯಗಳಿಗೆ ಕೈಗನ್ನಡಿಯಾಗಿ ಒಡಮೂಡಲಿರುವ ಈ ಸಮ್ಮೇಳನದಲ್ಲಿ ಕರ್ನಾಟಕದ ಸಮಸ್ತ ಜನತೆ ಭಾಗಿಯಾಗಬೇಕೆಂಬುದು ನಮ್ಮ ಬಯಕೆ.

ರಾಷ್ಟ್ರಕವಿ ಕುವೆಂಪು ಕರ್ನಾಟಕವನ್ನು ಹೀಗೆಂದು ಬಣ್ಣಿಸಿದ್ದಾರೆ. ಕರ್ನಾಟಕವೆಂಬುದೇನು ಹೆಸರೇ ಬರಿಯ ಮಣ್ಣಿಗೆ, ಯಂತ್ರ ಕಣಾ, ಶಕ್ತಿ ಕಣಾ, ತಾಯಿ ಕಣಾ, ದೇವಿ ಕಣಾ, ಬೆಂಕಿ ಕಣಾ, ಸಿಡಿಲು ಕಣಾ! ಮಹಾಕವಿಯ ನುಡಿಮುತ್ತಿನಂತೆ ಕರ್ನಾಟಕ ರಾಜ್ಯವು ಈ ಎಲ್ಲಾ ಶಕ್ತಿ, ಭಾವನೆ, ದೈವೀ ಸ್ವರೂಪಗಳ ಸಂಗಮವಾಗಿದೆ.

ಕರ್ನಾಟಕ ಏಕೀಕರಣದ ನಂತರದ ಐವತ್ತೈದು ವರ್ಷಗಳಲ್ಲಿ ನಮ್ಮ ನಾಡು ಹಲವಾರು ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಆರಂಭದ ದಶಕವು ನಾಡಿನ ನೀರಾವರಿ ವಿದ್ಯುತ್ ಇತ್ಯಾದಿ ಮೂಲ ವಲಯಗಳ ಸುಧಾರಣೆಗೆ ನಾಂದಿ ಹಾಡಿದರೆ, ಎರಡನೇ ದಶಕವು ಈ ಯೋಜನೆಗಳ ಸಾಕಾರಕ್ಕೆ ಸಾಕ್ಷಿಯಾಯಿತು. ಮೂರನೇ ದಶಕವು ಭೂ ಸುಧಾರಣೆಗಳಾದ ಉಳುವವನೇ ಹೊಲದೊಡೆಯ ಹಾಗೂ ಸಾಮಾಜಿಕ ಪರಿವರ್ತನೆಯ ಜೀತ ಪದ್ಧತಿ ನಿರ್ಮೂಲನೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇತ್ಯಾದಿ ರಾಷ್ಟ್ರವ್ಯಾಪಿ ಮನ್ನಣೆಯ ಕಾರ್ಯಕ್ರಮಗಳಿಂದ ಗಮನ ಸೆಳೆಯಿತು. ನಾಲ್ಕನೇ ದಶಕವು ಆಡಳಿತ ವಿಕೇಂದ್ರೀಕರಣಕ್ಕೆ ಮುನ್ನುಡಿ ಬರೆಯಿತು. ಐದನೇ ದಶಕವು ನೂತನ ಶತಮಾನದ ಆರಂಭದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಗತ್ತಿನ ಗಮನ ಸೆಳೆದಿದೆ.

ಇದೀಗ ಕಳೆದ ಐದು ದಶಕಗಳ ಸಾಧನೆ-ಪ್ರಗತಿಗಳನ್ನು ಸಮ್ಮಿಲನಗೊಳಿಸಿಕೊಂಡು ಮುನ್ನಡೆಯುವ ಸಂಕ್ರಮಣ ಕಾಲದಲ್ಲಿ ನಾವಿದ್ದೇವೆ. ಹಿಂದಿನ ಪ್ರಗತಿಯನ್ನು ಸಂಭ್ರಮಿಸುವ, ಮುಂದಿನ ಹಾದಿಯನ್ನು ಅನ್ವೇಷಿಸುವ ಪ್ರಯತ್ನಗಳಿಗೆ ವೇದಿಕೆಯಾಗುತ್ತಿರುವ ದ್ವಿತೀಯ ವಿಶ್ವ ಕನ್ನಡ ಸಮ್ಮೇಳನಕ್ಕೆ ನಾಡಿನ ಹಲವಾರು ಸಾಧಕರು, ಪ್ರತಿಭಾನ್ವಿತರು, ಉದ್ಯಮಿಗಳು, ಸಾಹಿತಿ-ಕಲಾವಿದರು, ಆಡಳಿತ ಧುರೀಣರನ್ನು ಆಹ್ವಾನಿಸಲಾಗಿದೆ.

ಗಣ್ಯ ಆಹ್ವಾನಿತರು : ಇನ್‌ಪೋಸಿಸ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟಿರುವ ಡಾ ಎನ್. ಆರ್. ನಾರಾಯಣ ಮೂರ್ತಿ ಅವರನ್ನು ಈ ಎರಡನೇ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಹಾಗೂ ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ, ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಸುಪ್ರಸಿದ್ಧ ವಿಜ್ಞಾನಿ ಡಾ ಸಿ. ಎನ್.ಆರ್.ರಾವ್, ರಾಷ್ಟ್ರಕವಿ ಡಾ ಜಿ.ಎಸ್. ಶಿವರುದ್ರಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ ಯು.ಆರ್. ಅನಂತಮೂರ್ತಿ, ಹೆಸರಾಂತ ಕವಿ ಚನ್ನವೀರ ಕಣವಿ, ಪದ್ಮಶ್ರೀ ಡಾ ಕೆ. ಎಸ್. ನಿಸಾರ್ ಅಹಮದ್, ಹೆಸರಾಂತ ಸಾಹಿತಿಗಳಾದ ಡಾ ಚಂದ್ರಶೇಖರ ಕಂಬಾರ, ಬರಗೂರು ರಾಮಚಂದ್ರಪ್ಪ, ಡಾ ಸುಧಾಮೂರ್ತಿ ಮುಂತಾದವರಿಗೆ ಕರೆಯೋಲೆ ಹೋಗಿದೆ.

ಕಲಾವಿದರು, ಕ್ರೀಡಾಪಟುಗಳು : ರಂಗಭೂಮಿ ಕಲಾವಿದ ಏಣಗಿ ಬಾಳಪ್ಪ, ಖ್ಯಾತ ಚಲನಚಿತ್ರ ನಟ ನಟಿಯರಾದ ಅಂಬರೀಶ್, ಬಿ. ಸರೋಜಾದೇವಿ, ಲೀಲಾವತಿ, ಜಯಂತಿ, ಭಾರತಿ ವಿಷ್ಣುವರ್ಧನ್, ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಕ್ರಿಕೆಟ್ ಲೋಕದ ದಿಗ್ಗಜರಾದ ಜಿ.ಆರ್. ವಿಶ್ವನಾಥ್, ಸಯ್ಯದ್ ಕಿರ್ಮಾನಿ ಮತ್ತು ಅನಿಲ್ ಕುಂಬ್ಳೆ, ಅಶ್ವಿನಿ ನಾಚಪ್ಪ, ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತರಾದ ಆಶ್ವಿನಿ ಚಿದಾನಂದ ಶಿಟ್ಟಿ, ಮಮತಾ ಪೂಜಾರ್, ಪರಿಸರ ರಕ್ಷಕಿ ಸಾಲುಮರದ ತಿಮ್ಮಕ್ಕ, ಜಾನಪದ ತಜ್ಞರಾದ ಸುಕ್ರಿ ಬೊಮ್ಮನಗೌಡ ಹಾಗೂ ಪುಟ್ಟಮಲ್ಲೇಗೌಡ, ಹೆಸರಾಂತ ಉದ್ಯಮಿಗಳಾದ ಡಾ ವಿಜಯ್ ಮಲ್ಯ, ಬಿ.ಆರ್. ಶೆಟ್ಟಿ, ಕ್ಯಾಪ್ಟನ್ ಜಿ.ಆರ್. ಗೋಪಿನಾಥ್, ಮ್ಯಾಗ್‌ಸೆಸ್ಸೇ ಪ್ರಶಸ್ತಿ ವಿಜೇತ ಡಾ. ಎಚ್. ಸುದರ್ಶನ್, ಅಮೆರಿಕಾದ ಅಕ್ಕ ಸಂಸ್ಥೆಯ ಅಮರನಾಥ ಗೌಡ, ಯುನೈಟೆಡ್ ಕಿಂಗ್‌ಡಂನ ಕನ್ನಡ ಬಳಗದ ಡಾ ಭಾನುಮತಿ, ಅವರುಗಳನ್ನು ಆತ್ಮೀಯವಾಗಿ ಆಮಂತ್ರಿಸಲಾಗಿದೆ.

ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡದ ಒಂದು ನೂರು ಮೇರು ಕೃತಿಗಳನ್ನು ಹಾಗೂ ಹಂ.ಪಾ. ನಾಗರಾಜಯ್ಯ ಮತ್ತು ಜಿ.ಎನ್. ಮೋಹನ್ ಸಂಪಾದಕತ್ವದ ಪುನರಾವಲೋಕನ ಸಂದರ್ಭ ಗ್ರಂಥವನ್ನು ಬಿಡುಗಡೆ ಮಾಡಲಾಗುವುದು.

ಮಾರ್ಚ್ 13ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ರಾಜ್ಯ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕಿ ಮೋಟಮ್ಮ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ, ಎನ್. ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ, ಸಾಹಿತ್ಯ ಕ್ಷೇತ್ರದ ದಿಗ್ಗಜ ನಾಡೋಜ ಡಾ. ದೇ. ಜವರೇಗೌಡ, ಡಾ ಪಾಟೀಲ ಪುಟ್ಟಪ್ಪ ಮತ್ತು ಡಾ. ಜಿ. ನಾರಾಯಣ, ಹೆಸರಾಂತ ವಿಜ್ಞಾನಿ ಡಾ. ಯು.ಆರ್. ರಾವ್, ಖ್ಯಾತ ನಿಘಂಟುಕಾರ ಡಾ. ಜಿ. ವೆಂಕಟಸುಬ್ಬಯ್ಯ, ಹೆಸರಾಂತ ಕ್ರೀಡಾಪಟು ಪ್ರಕಾಶ್ ಪಡುಕೋಣೆ, ಪತ್ರಿಕೋದ್ಯಮ ದಿಗ್ಗಜ ಎಸ್.ವಿ. ಜಯಶೀಲ ರಾವ್ ಅವರೂ ಸೇರಿದಂತೆ ಹಲವು ಗಣ್ಯರನ್ನು ಈ ಐತಿಹಾಸಿಕ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ವಿಶ್ವ ಕನ್ನಡ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಉಮೇಶ್ ವಿ ಕತ್ತಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಸಂಸದ ಪ್ರಭಾಕರ ಕೋರೆ, ಜಿಲ್ಲೆಯ ಸಂಸದರು ಹಾಗೂ ಶಾಸಕರ ಮಾರ್ಗದರ್ಶನದಲ್ಲಿ ಬೆಳಗಾವಿಯ ಜಿಲ್ಲಾಡಳಿತವು ಸಮ್ಮೇಳನದ ಸಕಲ ಕಾರ್ಯಕ್ರಮಗಳನ್ನು ಕರಾರುವಕ್ಕಾಗಿ ಅನುಷ್ಠಾನಗೊಳಿಸಲು ಶ್ರಮವಹಿಸುತ್ತಿದೆ. ಸಮ್ಮೇಳನಕ್ಕೆ ಆಗಮಿಸುವ ಅತಿಥಿ ಗಣ್ಯರು, ಸಾಹಿತಿ-ಕಲಾವಿದರು, ಹೊರನಾಡ ಕನ್ನಡಿಗರು ಹಾಗೂ ಜನಸಾಮಾನ್ಯರಿಗೂ ಉತ್ತಮ ಊಟ ಮತ್ತು ವಸತಿ ಕಲ್ಪಿಸಲು ಯೋಜನಾ ಬದ್ಧ ವ್ಯವಸ್ಥೆ ರೂಪಿಸಲಾಗಿದೆ

ಬೆಳಗಾವಿ ಕನ್ನಡ ಸಮ್ಮೇಳನ: ವಾಟಾಳ್ ಏನ್ ಹೇಳ್ತಾರೆ?

ಮೈಸೂರು: ಬೆಳಗಾವಿ ಕನ್ನಡ ಸಮ್ಮೇಳನ ಸಮ್ಮುಖದಲ್ಲಿ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರು ತಮ್ಮ ಸಹಜ ಶೈಲಿಯಲ್ಲಿ 'ಇಂತಹ ಸಮ್ಮೇಳನಗಳು ಅರ್ಥಹೀನ. ಇವಕ್ಕೆ ಸ್ಪಷ್ಟ ಉದ್ದೇಶವೇ ಇರುವುದಿಲ್ಲ' ಎಂದೆಲ್ಲ ಹರಿಹಾಯ್ದಿದ್ದಾರೆ.

50 ವರ್ಷಗಳ ಸುದೀರ್ಘ ಹೋರಾಟದ ನಂತರವೂ ರಾಜ್ಯದಲ್ಲಿ ಕನ್ನಡ ದುಸ್ಥಿತಿಯಲ್ಲಿಯೇ ಇದೆ. ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಮೃತ ಹಸ್ತದಿಂದ ಬೆಳಗಾವಿ ಸಮ್ಮೇಳನ ಉದ್ಘಾಟಿಸುತ್ತಿರುವುದರ ಪಾವಿತ್ರ್ಯತೆಯಾದರೂ ಏನು ಎಂಬುದೇ ಅರ್ಥವಾಗದು. ಅದೆಲ್ಲಾದರೂ ಹೋಗಲಿ ಎಂದರೆ ಇದೆಂತಹುದು, ಬಾಲಿವುಡ್ ಬೆಡಗಿ ಐಶ್ವರ್ಯ ರೈ ಮತ್ತು ತಮಿಳ್ ಸೆಲ್ವಿ ಜಯಲಲಿತಾ ಅವರನ್ನು ಆಹ್ವಾನಿಸುವುದು? ಅವರೇನೂ ಅಷ್ಟು ದೊಡ್ಡವರೇ? ಹೋಗಲಿ ಅವರು ಕನ್ನಡಕ್ಕೆ ಮಾಡಿರುವ ಸೇವೆಯಾದರೂ ಏನು ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ರಾಜ್ಯಸಭೆಗೆ ಬಾಲಿವುಡ್ ಅಭಿನೇತ್ರಿ ಹೇಮಾಮಾಲಿನಿ ರಾಜ್ಯದಿಂದ ಚುನಾಯಿತರಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ವಾಟಾಳ್ ಅವರು ಏಕೆ, ಕನ್ನಡದ ನೆಲದಲ್ಲಿ ಕನಸಿನ ಕನ್ಯೆಯರು ಇಲ್ಲವೇ?! ಎಂಬ ತುಂಟ ಪ್ರಶ್ನೆಯನ್ನು ಎತ್ತಿದ್ದಾರೆ. ಕನ್ನಡ ಕೇಂದ್ರ ಚಳವಳಿ ಸಮಿತಿ (KKCS) ಗುರುವಾರ ಇಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತಿಥಿ ಪಾತ್ರಕ್ಕೆ ಐಶ್ವರ್ಯ ಅಸ್ತು: ಈ ಮಧ್ಯೆ, ಬೆಳಗಾವಿ ಸಮ್ಮೇಳನದಲ್ಲಿ ಅತಿಥಿ ಪಾತ್ರದಲ್ಲಿ ಪಾಲ್ಗೊಳ್ಳುವುದಕ್ಕೆ ಬಾಲಿವುಡ್ ಚೆಲುವೆ ಐಶ್ವರ್ಯ ರೈ ಒಪ್ಪಿಗೆ ಸೂಚಿಸಿದ್ದಾರೆ. ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಕೋರಿ ಸಮ್ಮೇಳನದ ವಿಶೇಷಾಧಿಕಾರಿ ಐಎಂ ವಿಠ್ಠಲಮೂರ್ತಿ ಅವರು ಸರಕಾರದ ಪರವಾಗಿ ಮಂಗಳೂರು ಮೂಲದ ಐಶ್ವರ್ಯಗೆ ವಿಶೇಷ ಆಮಂತ್ರಣ ನೀಡಿದ್ದರು. ಇದೇ ಸಂದರ್ಭದಲ್ಲಿ, ಮಾರ್ಚ್ 11ರಿಂದ ಆರಂಭವಾಗುವ ಮೂರು ದಿನಗಳ ವಿಶ್ವ ಕನ್ನಡ ಸಮ್ಮೇಳನವನ್ನು ಸ್ವತಃ ಐಶ್ವರ್ಯ ರೈ ಅವರೇ ಉದ್ಘಾಟಿಸುತ್ತಾರೆ ಎಂಬ ಊಹಾಪೋಹವೂ ಎದ್ದಿತ್ತು

ವಿಶ್ವ ಕನ್ನಡ ಸಮ್ಮೇಳನ ಕಾರ್ಯಕ್ರಮದ ನೇರ ಪ್ರಸಾರ........